ಚಿಕ್ಕಮಗಳೂರು, ಎ08(SS): ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕೆಲಸ ಮಾಡಿ ಓಟು ಕೇಳುತ್ತಿದ್ದೇನೆಯೇ ವಿನಃ ಬೊಗಳೆ ಬಿಟ್ಟು ಓಟು ಕೇಳುತ್ತಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಶೋಭಾಕರಂದ್ಲಾಜೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಎಲ್ಲ ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಿ ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಪರಿವರ್ತಿಸಲಾಗಿದೆ. ನಮ್ಮ ರಾಜ್ಯದಲ್ಲೇ ಅತಿಹೆಚ್ಚು ಕೇಂದ್ರ ರಸ್ತೆ ನಿಧಿಯಿಂದ ಹಣ ಬಂದಿರುವುದೇ ನನ್ನ ಕ್ಷೇತ್ರಕ್ಕೆ. ಹಾಗಾಗಿ ಕಳೆದ 5 ವರ್ಷದಲ್ಲಿ ಬರಿ ಬೊಗಳೆ ಬಿಟ್ಟು ನಾನು ಮತ ಕೇಳುತ್ತಿಲ್ಲ. ಸಾಕಷ್ಟು ಕೆಲಸ ಮಾಡಿಸಿದ್ದೇನೆ ಎಂದು ತಿಳಿಸಿದ್ದಾರೆ.
ಕಳೆದ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಇಂದಿರಾಗಾಂಧಿ ಮುಖವಾಡ ಹಾಕಿಕೊಂಡು ಓಟು ಕೇಳುತ್ತಿತ್ತು. ಈಗ ಆ ಮುಖವಾಡಕ್ಕೂ ಬೆಲೆ ಇಲ್ಲದಂತಾಗಿದೆ. ಉತ್ತರ ಪ್ರದೇಶ ಕಾಂಗ್ರೆಸ್ಗೆ ಜೀವದಾನ ನೀಡಿದ ರಾಜ್ಯ. ನೆಹರು ಅವರಿಂದ ಹಿಡಿದು ಇಲ್ಲಿಯತನಕ ಆ ರಾಜ್ಯ ಕಾಂಗ್ರೆಸ್ಗೆ ಭದ್ರ ನೆಲೆ ಕಟ್ಟಿಕೊಟ್ಟಿದೆ. ಆದರೆ ಅಲ್ಲಿ ಗೆಲ್ಲುವುದಕ್ಕಾಗುವುದಿಲ್ಲ ಎಂದು ಅರಿತಿರುವ ರಾಹುಲ್ ಗಾಂಧಿ ಅವರು ಕೇರಳದ ವಯನಾಡಿಗೆ ಪಲಾಯನ ಮಾಡಿದ್ದಾರೆ ಎಂದು ಟೀಕಿಸಿದರು.
ಕೇಂದ್ರದ ಮೋದಿ ನೇತೃತ್ವದ ಸರಕಾರ ಆಯುಷ್ಮಾನ ಭಾರತ್, ಉಜ್ವಲ, ಉಚಿತ ವಿದ್ಯುತ್ ಸಂಪರ್ಕ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದು ಅನುಷ್ಠಾನಗೊಳಿಸಿದೆ. ಈ ಕ್ಷೇತ್ರದ ಹಿಂದಿನ ಸಂಸದರು ಸರಿಯಾಗಿ ಕೆಲಸ ಮಾಡಿದ್ದರೆ ಮಲೆನಾಡಿನಲ್ಲಿ ರಸ್ತೆಗಳ ಸ್ಥಿತಿ ಈ ರೀತಿಯಾಗುತ್ತಿರಲಿಲ್ಲ. ರಾಜ್ಯದ ಮೊದಲ ಸಖಿ ಕೇಂದ್ರ ಉಡುಪಿ ಜಿಲ್ಲೆಗೆ ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಐಟಿ ಒಂದು ಸ್ವತಂತ್ರ ಸಂಸ್ಥೆ. ಅದಕ್ಕೆ ಪಕ್ಷ ಬೇಧವಿಲ್ಲ. ಉದ್ದೇಶಪೂರ್ವಕವಾಗಿ ಯಾರ ಮನೆಮೇಲೂ ದಾಳಿ ಮಾಡುವುದಿಲ್ಲ. ಹಣಕಾಸಿನ ವ್ಯವಹಾರ ನೋಡಿಕೊಂಡು ದಾಳಿ ಮಾಡುತ್ತಾರೆ. ಅವರಿಗೆ ಐಟಿಯಿಂದ ತೊಂದರೆಯಾದಾಗ ಮೋದಿ ಮಾಡಿಸಿದರು ಎನ್ನುತ್ತಾರೆ. ನಮ್ಮ ಪಕ್ಷದವರಿಗೆ ತೊಂದೆಯಾದಾಗ ಆಗಲಿ ಬಿಡಿ ಎನ್ನುತ್ತಾರೆ. ಇವರದು ಇಬ್ಬಗೆಯ ನೀತಿ. ಎರಡು ತಲೆ ಹಾವಿದ್ದಂತೆ ಎಂದು ಟೀಕಿಸಿದರು.
ದೇಶದಲ್ಲಿ ಕಾಂಗ್ರೆಸ್ಗೆ ಸುಭದ್ರ ನೆಲೆಯಿಲ್ಲ. ಜೆಡಿಎಸ್ ಪಕ್ಷ ಬರಿ ದೇವೇಗೌಡರ ಮಕ್ಕಳು, ಮೊಮ್ಮಕ್ಕಳನ್ನೆ ಚುನಾವಣೆಗೆ ನಿಲ್ಲಿಸಿ ಕುಟುಂಬ ರಾಜಕಾರಣ ಮಾಡುತ್ತಿದೆ. ಅವರಿಂದ ನಾವು ಪಾಠ ಕಲಿಯುವ ಅಗತ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದರು.