ನವದೆಹಲಿ,ಏ06(AZM): ಕೇವಲ ಓಟಿಗಾಗಿ ಮಾತ್ರ ಚುನಾವಣಾ ಪ್ರಣಾಳಿಕೆಯಲ್ಲಿ ಕನಿಷ್ಟ ಅದಾಯ ಯೋಜನೆಯನ್ನು ಕಾಂಗ್ರೆಸ್ ಘೋಷಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಆರೋಪಿಸಿದ್ದಾರೆ.
ಓರಿಸ್ಸಾದಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಈ ಕುರಿತು ಅವರು ಮಾತನಾಡಿದರು. ನಿಜವಾಗಿಯೂ ಕಾಂಗ್ರೆಸ್ಸಿಗೆ ಬಡತನ ನಿರ್ಮೂಲನೆ ಮಾಡಬೇಕೆಂಬ ಕಾಳಜಿ ಇಲ್ಲ. ಕೇವಲ ವೋಟಿಗಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಈ ಭರವಸೆ ಸೇರಿಸಲಾಗಿದೆ ಎಂದ ಅವರು, ಕಾಂಗ್ರೆಸ್ ದಶಕಗಳಿಂದ ಬಡತನ ನಿರ್ಮೂಲನೆ ಬಗ್ಗೆ ಹೇಳುತ್ತಲೇ ಬರುತ್ತಿದೆ. ಆದರೂ ದೇಶದಲ್ಲಿ ಶ್ರೀಮಂತರು ಶ್ರೀಮಂತರಾಗಿಯೇ, ಬಡವರು ಬಡವರಾಗಿಯೇ ಉಳಿದಿದ್ದಾರೆ. ಇದರಲ್ಲಿ ಹೆಚ್ಚು ಶ್ರೀಮಂತರು ಕಾಂಗ್ರೆಸ್ ಪಕ್ಷದವರೇ ಇದ್ದಾರೆ ಎಂದು ಇದೇ ಸಂದರ್ಭದಲ್ಲಿ ಅವರು ಆರೋಪಿಸಿದರು.
ಇನ್ನು ನಮ್ಮ ಕೇಂದ್ರ ಸರ್ಕಾರ ಒರಿಸ್ಸಾದ ರೈಲ್ವೆ ಹಳಿ ಅಭಿವೃದ್ಧಿಪಡಿಸಿದೆ. ಜತೆಗೆ 24 ಲಕ್ಷ ಜನರಿಗೆ ಉದ್ಯೋಗ ನೀಡಿದೆ. ಇಲ್ಲಿನ ಜನರಿಗೆ ಬಿಜೆಪಿ ಮೇಲೆ ನಂಬಿಕೆ ಬಂದಿದೆ. ಕಾಂಗ್ರೆಸ್-ಬಿಜೆಡಿ ಪಕ್ಷಕ್ಕೆ ಕೇವಲ ಬಡವರ ಮತಗಳು ಬೇಕಾಗಿದ್ದು, ರಾಜ್ಯದ ಅಭಿವೃದ್ದಿ ಬೇಕಿಲ್ಲ. ಹೀಗಾಗಿ ಈ ಬಾರಿ ಕೇಂದ್ರ ಮತ್ತು ಒರಿಸ್ಸಾದಲ್ಲಿ ಬಿಜೆಪಿ ಸರ್ಕಾರವನ್ನು ಗೆಲ್ಲಿಸಿ. ನಾವು ನಿಮ್ಮ ಪರವಾಗಿ ನಿಲ್ಲುತ್ತೇವೆ ಎಂದರು.