ಹೈದರಬಾದ್, ಏ 06 (MSP): 'ರಾಹುಲ್ ಗಾಂಧಿಯವರೇ ಭಯೋತ್ಪಾದನೆ ನಿಮಗೆ ಸಮಸ್ಯೆ ಅಲ್ಲ ಎಂದು ಅನಿಸಿದರೆ ಮತ್ಯಾಕೆ ಭದ್ರತೆ? ನಿಮಗೆ ನೀಡಿರುವ ಎಸ್ ಪಿಜಿ ಭದ್ರತೆಯನ್ನು ವಾಪಸ್ ನೀಡಿ ಅಥವಾ ಅದನ್ನು ಹಿಂಪಡೆಯುವಂತೆ ಕೇಂದ್ರಕ್ಕೆ ಪತ್ರ ಬರೆಯಿರಿ' ಎಂದು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್, ರಾಹುಲ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
"ದೇಶದಲ್ಲಿ ಭಯೋತ್ಪಾದನೆ ದೊಡ್ಡ ಸಮಸ್ಯೆ ಅಲ್ಲ " ಎಂದು ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ ವಿರುದ್ದ ಖಡಕ್ ಮಾತಿನೇಟು ನೀಡಿರುವ ಸುಷ್ಮಾ ಸ್ವರಾಜ್, ರಾಹುಲ್ ಗಾಂಧಿಗೆ ಭಯೋತ್ಪಾದನೆ ಸಮಸ್ಯೆಯಂತೆ ಕಾಣಿಸಿಲ್ಲವಂತೆ ಅವರಿಗೆ ಉದ್ಯೋಗ ದೊಡ್ಡ ಸಮಸ್ಯೆಯಾಗಿದೆಯಂತೆ. ರಾಹುಲ್ ಅವರೇ ನಾನು ನಿಮಗೆ ಒಂದು ಮಾತು ಹೇಳುತ್ತೇನೆ ಗಮವಿಟ್ಟು ಕೇಳಿ " ಒಂದು ವೇಳೆ ಟೆರರಿಸಂ ಸಮಸ್ಯೆ ಅಲ್ಲ ಎಂದಾದರೆ ದೇಶದಲ್ಲಿ ಭಯೋತ್ಪಾದನೆ ಇಲ್ಲ ಎಂದೇ ಅರ್ಥ. ಹಾಗಿದ್ರೆ ನೀವ್ಯಾಕೆ ತಿರುಗಾಡುವ ಸ್ಥಳದಲ್ಲೆಲ್ಲಾ ಎಸ್ ಪಿಜಿ ಭದ್ರತೆ ಇಟ್ಟುಕೊಂಡಿದ್ದೀರಿ" ಎಂದು ಪ್ರಶ್ನಿಸಿದ್ದಾರೆ
ನಿಮ್ಮ ತಂದೆ, ದೇಶದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯಾದ ದಿನದಿಂದ ಇಂದಿನವರೆಗೆ ನಿಮ್ಮ ಕುಟುಂಬದ ಎಲ್ಲಾ ಸದಸ್ಯರಿಗೂ ಎಸ್ ಪಿಜಿ ಭದ್ರತೆ ಇದೆ. ಒಂದು ವೇಳೆ ನಿಮಗೆ ಭಯೋತ್ಪಾದನೆ ಸಮಸ್ಯೆಯೇ ಅಲ್ಲಾ ಎಂದು ಭಾವಿಸಿದರೆ, ನಿಮಗೆ ಎಸ್ ಪಿಜಿ ರಕ್ಷಣೆ ಅಗತ್ಯವಿಲ್ಲ ಎಂದು ಕೇಂದ್ರಕ್ಕೆ ಪತ್ರ ಮೂಲಕ ತಿಳಿಸಿ. ಯಾಕೆಂದರೆ ದೇಶದಲ್ಲಿ ಭಯೋತ್ಪಾದನೆ ಇಲ್ಲ ಎಂದು ನಿಮಗೆ ಅನ್ನಿಸಿದ್ರೆ ಯಾರಿಗೂ ಹೆದರಬೇಕಿಲ್ಲ ಅಲ್ಲವೇ ಎಂದು ಸುಷ್ಮಾ ತಿರುಗೇಟು ನೀಡಿದ್ದಾರೆ.