ಪುಣೆ, ಎಂ6(SS): ಪ್ರಾಮಾಣಿಕವಾಗಿ ನಾನು ಪ್ರಧಾನಿ ಮೋದಿಯನ್ನು ಪ್ರೀತಿಸುತ್ತೇನೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಗಳ ಜತೆ ಮಾತನಾಡಿದ ಅವರು, ಪ್ರಾಮಾಣಿಕವಾಗಿ ನಾನು ಪ್ರಧಾನಿ ಮೋದಿಯನ್ನು ಪ್ರೀತಿಸುತ್ತೇನೆ. ಅವರ ವಿರುದ್ಧ ಯಾವುದೇ ರೀತಿಯ ದ್ವೇಷ ಇಲ್ಲ. ಆದರೆ ಅವರಿಗೆ ನನ್ನಂತಹ ಭಾವವಿಲ್ಲ ಎಂದು ಹೇಳಿದ್ದಾರೆ.
ಬಾಲ್ಯದ ಬಗ್ಗೆ ಮಾತನಾಡಿದ ರಾಹುಲ್, ಸಹೋದರಿ ಪ್ರಿಯಾಂಕಾ ಗಾಂಧಿ ಅವರೇ ತಮಗೆ ಬೆಸ್ಟ್ ಫ್ರೆಂಡ್. ನಾವಿಬ್ಬರು ಒಬ್ಬರನ್ನೊಬ್ಬರು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ. ನಮ್ಮ ನಡುವೆ ವಾದ ನಡೆದರೆ ಕೆಲವೊಮ್ಮೆ ಅವಳೇ ಸುಮ್ಮನಾಗುತ್ತಿದ್ದಳು, ಮತ್ತೆ ಕೆಲವೊಮ್ಮೆ ನಾನು. ಆಕೆ ಕಟ್ಟಿದ ರಾಖಿ ಅದಾಗಿಯೇ ತುಂಡಾಗುವವರೆಗೂ ನಾನು ತೆಗೆಯುವುದಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಅಜ್ಜಿ ಇಂದಿರಾ ಗಾಂಧಿ ಮತ್ತು ತಂದೆ ರಾಜೀವ್ ಗಾಂಧಿ ಅವರ ಹತ್ಯೆಯ ಕುರಿತಾಗಿ ಮಾತನಾಡಿದ ಅವರು, ಹಿಂಸಾಚಾರ ನಮ್ಮ ಕುಟುಂಬವನ್ನು ಅತಿಯಾಗಿ ಬಾಧಿಸಿದೆ ಎಂದು ತಿಳಿಸಿದ್ದಾರೆ.
ಅಜ್ಜಿ ಇಂದಿರಾ ಗಾಂಧಿ ಮನೆಗೆ ಬರುವಾಗ ನಾನು ಆಕೆಯ ಕೋಣೆಯಲ್ಲಿದ್ದ ಕರ್ಟನ್ ಹಿಂದೆ ಅಡಗಿ ಕುಳಿತಿರುತ್ತಿದ್ದೆ. ಆಕೆಯನ್ನು ಹೆದರಿಸುವುದು ನನ್ನ ಉದ್ದೇಶವಾಗಿತ್ತು. ಅವರು ಕೂಡ ಹೆದರಿದಂತೆ ನಟಿಸುತ್ತಿದ್ದರು ಬಾಲ್ಯವನ್ನು ನೆನಪಿಸಿಕೊಂಡರು.