ಹೊಸದೆಹಲಿ,ಏ05(AZM):ಪಾಕಿಸ್ತಾನವು ಬಂಧನಕ್ಕೊಳಗಾಗಿಸಿದ್ದ 100 ಮೀನುಗಾರರನ್ನು ಏ.೮ರಂದು ಬಿಡುಗಡೆಗೊಳಿಸಲಿದೆ ಎಂದು ಭಾರತ ಹಾಗೂ ಪಾಕಿಸ್ತಾನದ ರಾಜತಾಂತ್ರಿಕ ಮೂಲಗಳು ಖಚಿತಪಡಿಸಿದೆ.
ಏ.೭ರಂದು 100 ಮೀನುಗಾರರನ್ನು ಪಾಕಿಸ್ತಾನದ ಜೈಲುಗಳಿಂದ ಬಿಡುಗಡೆ ಮಾಡಲಿದ್ದು, ವಾಘಾ ಗಡಿ ಮೂಲಕ ಏ.8ರಂದು ಭಾರತಕ್ಕೆ ಹಸ್ತಾಂತರ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನದ ಜೈಲುಗಳಲ್ಲಿ ಇರುವ ಮೂನ್ನೂರಾ ಎಂಬತ್ತೈದು ಭಾರತೀಯ ಮೀನುಗಾರರು ಹಾಗೂ ಹತ್ತು ನಾಗರಿಕರನ್ನು ಬಿಡುಗಡೆ ಮಾಡುವಂತೆ ನವದೆಹಲಿಯಲ್ಲಿ ಇರುವ ಪಾಕಿಸ್ತಾನ ಹೈಕಮಿಷನ್ ಗೆ ಭಾರತ ವಿಶೇಷ ಮನವಿ ಸಲ್ಲಿಸಿತ್ತು. ಮೂಲಗಳ ಪ್ರಕಾರ, ಒಟ್ಟು 360 ಕೈದಿಗಳನ್ನು ಬಿಡುಗಡೆ ಮಾಡಲು ಪಾಕ್ ಯೋಜನೆ ರೂಪಿಸಿದೆ. ಅದರಲ್ಲಿ 5 ನಾಗರಿಕರು ಕೂಡ ಒಳಗೊಂಡಿದ್ದಾರೆ.
ಪ್ರತೀ ವಾರವು 100ರ ಸಂಖ್ಯೆಯಂತೆ ಬಿಡುಗಡೆ ಮಾಡಲು ಚಿಂತನೆ ನಡೆದಿದ್ದು, ಕೊನೆ ತಂಡವು ಏಪ್ರಿಲ್ 29ರಂದು ಬಿಡುಗಡೆ ಆಗುವ ಸಾಧ್ಯತೆ ಇದೆ. ಆಕಸ್ಮಿಕವಾಗಿ ಜಲ ಗಡಿಯನ್ನು ಉಲ್ಲಂಘಿಸಿ, ಪಾಕಿಸ್ತಾನ ಪ್ರವೇಶಿಸಿ ಬಂಧನಕ್ಕೊಳಗಾದ ಮೀನುಗಾರರನ್ನು ಅತೀ ದೊಡ್ಡ ಸಂಖ್ಯೆಯಲ್ಲಿ ಬಿಡುಗಡೆ ಮಾಡುತ್ತಿರುವುದು ಇದು ಎರಡನೇ ಬಾರಿಗೆ. 2010ರಲ್ಲಿ 442 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಲಾಗಿತ್ತು.