ನವದೆಹಲಿ, ಆ 11 (DaijiworldNews/SM): ಕೇಂದ್ರ ಸರಕಾರದ ಕೇಂದ್ರಿಯ ಮತ್ತು ಸಮಗ್ರ ಜಿಎಸ್ ಟಿ ಕಾನೂನಿನ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಇದರಿಂದಾಗಿ ಕೇಂದ್ರ ಸರ್ಕಾರ ಆನ್ಲೈನ್ ಗೇಮಿಂಗ್, ಕ್ಯಾಸಿನೊಗಳು ಮತ್ತು ಕುದುರೆ ರೇಸ್ ಕ್ಲಬ್ಗಳ ಮೇಲೆ ಶೇಕಡಾ 28 ರಷ್ಟು ತೆರಿಗೆ ವಿಧಿಸಲು ಅವಕಾಶವಿರಲಿದೆ.
ಸಂಸತ್ತಿನ ಮುಂಗಾರು ಅಧಿವೇಶನದ ಕೊನೆಯ ದಿನದಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅಮಾನತು ವಿರೋಧಿಸಿ ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆಯೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸದನದಲ್ಲಿ ಈ ಮಹತ್ವದ ಮಸೂದೆ ಮಂಡಿಸಿದ್ದಾರೆ.
ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ-2023, ಮತ್ತು ಸಮಗ್ರ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ, 2023 ಅನ್ನು ಲೋಕಸಭೆಯಲ್ಲಿ ಯಾವುದೇ ಚರ್ಚೆಯಿಲ್ಲದೆ ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದೆ.
ಕ್ಯಾಸಿನೊಗಳು, ಕುದುರೆ ರೇಸಿಂಗ್ ಮತ್ತು ಆನ್ಲೈನ್ ಗೇಮಿಂಗ್ ಮೇಲಿನ ತೆರಿಗೆ ಕುರಿತು ಸ್ಪಷ್ಟತೆ ನೀಡಲು, 2017 ರ CGST ಕಾಯಿದೆಯ ಶೆಡ್ಯೂಲ್ III ರಲ್ಲಿನ ನಿಬಂಧನೆಗಳಿಗೆ ತಿದ್ದುಪಡಿ ತರಲಾಗಿದೆ.
IGST ಕಾಯಿದೆಯಲ್ಲಿನ ತಿದ್ದುಪಡಿಯು ಆನ್ಲೈನ್ ಗೇಮಿಂಗ್ಗೆ GST ವಿಧಿಸುವ ನಿಬಂಧನೆಗೆ ಸಂಬಂಧಿಸಿದ್ದು. ಇಂತಹ ಗೇಮಿಂಗ್ ಘಟಕಗಳು ಭಾರತದಲ್ಲಿ GST ನೋಂದಣಿ ಮಾಡಿಸುವುದು ಅಗತ್ಯವಾಗಿದೆ.