ಬೆಂಗಳೂರು,ಆ 11 (DaijiworldNews/AK): ರಾಜ್ಯದಲ್ಲಿ 1,695 ಕ್ಕೂ ಹೆಚ್ಚು ಅಕ್ರಮ ಶಾಲೆಗಳಿದ್ದು, ಅಂತಹ ಶಾಲೆಗಳನ್ನು ಹಂತ-ಹಂತವಾಗಿ ಮುಚ್ಚಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕರ್ನಾಟಕ ಪ್ರೈವೇಟ್ ಮ್ಯಾನೇಜ್ಮೆಂಟ್ ಅಸೋಸಿಯೇಷನ್ನೊಂದಿಗೆ ನಡೆದ ಸಭೆಯ ನಂತರ ಬಂಗಾರಪ್ಪ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಅನುಮತಿಯಿಲ್ಲದೆ ಆರಂಭಿಸಲಾಗುವ ಹೊಸ ಶಾಲೆಗಳಿಗೆ ಬ್ಲಾಕ್ ಶಿಕ್ಷಣಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಚಿವರು ಹೇಳಿದ್ದಾರೆ.ಖಾಸಗಿ ಶಾಲಾ ಸಂಘದ ಸದಸ್ಯರು ತಮ್ಮ ಕುಂದುಕೊರತೆಗಳ ಸಭೆಯಲ್ಲಿ ರಾಜ್ಯದಲ್ಲಿ ಕಾರ್ಯಾನಿರ್ವಹಿಸುತ್ತಿರುವ ಅಕ್ರಮ ಶಾಲೆಗಳ ಬಗ್ಗೆ ದೂರು ನೀಡಿದ್ದಾರೆ.
ಸಮಸ್ಯೆಯನ್ನು ಪರಿಹರಿಸಲು ನಾವು ವಿವಿಧ ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸಿದ್ದೇವೆ. ಶೀಘ್ರದಲ್ಲೇ ಅವುಗಳನ್ನು ಕಾರ್ಯಗತಗೊಳಿಸಲು ಪ್ರಾರಂಭಿಸುತ್ತೇವೆ ಎಂದು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ 1,695 ಅಕ್ರಮ ಶಾಲೆಗಳಿವೆ. ಈ ಶಾಲೆಗಳಲ್ಲಿ ಸಾವಿರಾರು ಮಕ್ಕಳು ಓದುತ್ತಿರುವುದರಿಂದ ಅವುಗಳನ್ನು ತಕ್ಷಣವೇ ಮುಚ್ಚಲು ಸಾಧ್ಯವಿಲ್ಲ. ಹಲವಾರು ಶಾಲೆಗಳನ್ನು ಅನುಮತಿ ಪಡೆಯದೆ ಮೇಲ್ದರ್ಜೆಗೇರಿಸಲಾಗಿದೆ. 190 ಶಾಲೆಗಳು ಸೂಕ್ತ ಅನುಮತಿ ಪಡೆಯದೆ ಸ್ಥಳ ಬದಲಾಯಿಸಿವೆ. ಶೀಘ್ರದಲ್ಲೇ ಇಂತಹ ಅಕ್ರಮ ಶಾಲೆಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತೇವೆ ಎಂದು ಹೇಳಿದರು.