ಬೆಳಗಾವಿ,ಆ 11 (DaijiworldNews/AK): ನಮ್ಮ ಸರ್ಕಾರ ಯಾರ ಗುತ್ತಿಗೆದಾರರ ಬಿಲ್ ಪಾವತಿಗೂ ತೊಂದರೆ ಮಾಡುವುದಿಲ್ಲ. ಮೂರು ವರ್ಷದಿಂದ ಬಿಲ್ ಪಾವತಿ ಮಾಡದೇ ಇದ್ದ ಬಿಜೆಪಿಯವರು ಹೋರಾಟ ಮಾಡಲು ಯಾವ ನೈತಿಕತೆಯೂ ಇಲ್ಲ. ಬಿಜೆಪಿಯವರಿಗೆ ಜನರ ಬಳಿ ದೂರಲು ಯಾವ ವಿಷಯವೂ ಇಲ್ಲ. ಆದ್ದರಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಅವರು ಇಂದು ಅಥಣಿ ಹೆಲಿಪ್ಯಾಡ್ ಬಳಿ ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿಯವರು ಭ್ರಷ್ಟಾಚಾರ , ಬೆಲೆಏರಿಕೆ, ಧರ್ಮ ರಾಜಕಾರಣ ಮಾಡಿದ್ದು ರಾಜ್ಯವನ್ನು ಆರ್ಥಿಕವಾಗಿ ಹಾಳು ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ 135 ಸ್ಥಾನವನ್ನು ಗಳಿಸಿರುವುದು ಬಿಜೆಪಿಯವರ ಭಯಕ್ಕೆ ಕಾರಣವಾಗಿದೆ ಎಂದು ಟೀಕೆ ಮಾಡಿದರು.
ಮಾಜಿ ಸಚಿವ ಆರ್.ಅಶೋಕ್ ಅವರು ತಮ್ಮ ಸರ್ಕಾರ ಬಿನ್ ಲ್ಯಾಡೆನ್ ಸರ್ಕಾರ ಎಂದು ಟೀಕಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭಯ ಶುರುವಾಗಿದೆ. ಹಾಗಾಗಿ ಹತಾಶರಾಗಿದ್ದಾರೆ. ನಮ್ಮ ಗ್ಯಾರಂಟಿ ಯೋಜನೆಗಳು ಜಾರಿಯಾಗುತ್ತಿದ್ದಂತೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಸಿಎಂ ಕಿಡಿಕಾರಿದರು.
ಬಿಜೆಪಿ ಸರ್ಕಾರದಲ್ಲಿ ಆಗಿರುವ ಕಾಮಗಾರಿಗಳಿಗೆ 2-3 ವರ್ಷಗಳಾದರೂ ಬಿಲ್ ಬಾಕಿ ಉಳಿಸಿ ಹೋಗಿದ್ದಾರೆ. ನಾವು ಅಧಿಕಾರಕ್ಕೆ ಬಂದು ಮೂರು ತಿಂಗಳಾಗಿದೆ. ಆದರೆ, ನಮ್ಮ ಮೇಲೆ ಒತ್ತಡ ಹಾಕುತ್ತಿದ್ದಾರೆ. ನಾವು ಹಿಂದಿನ ಸರ್ಕಾರದ ಮೇಲೆ 40 % ಕಮಿಷನ್ ಆರೋಪ ಮಾಡಿದ್ದೆವು. ಅದು ಪ್ರಮುಖವಾಗಿ ಚರ್ಚೆಯಾಗಿದೆ. ನಾವು ತನಿಖೆಯಿಂದ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಒಳ್ಳೆ ಕೆಲಸ ಮಾಡಿದವರಿಗೆ ತೊಂದರೆ ಕೊಡುವುದಿಲ್ಲ ಬಿಲ್ ಕೂಡ ಪಾವತಿಸಲಾಗುವುದು. ಈ ಕುರಿತಂತೆ ನಾಲ್ಕು ತಂಡಗಳನ್ನು ರಚಿಸಿ ತನಿಖೆಯಾಗುತ್ತಿದೆ. ವರದಿ ಬಂದ ಕೂಡಲೇ ಪರಿಶೀಲಿಸಿ ತಪ್ಪು ಮಾಡದಿದ್ದರೆ ಬಿಲ್ ಪಾವತಿಸುತ್ತೇವೆ. ತಪ್ಪಾಗಿದ್ದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಸಚಿವ ಚೆಲುವರಾಯಸ್ವಾಮಿಯವರ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಈ ಆರೋಪ ಎಲ್ಲಿ ಕೇಳಿಬಂದಿದೆ ಎಂದು ಪ್ರಶ್ನಿಸಿದ ಅವರು, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರ ಹೇಳಿಕೆಯನ್ನು ಗಮನಿಸಬೇಕು ಎಂದರು.
ಆತ್ಮಹತ್ಯೆ ಮಾಡಿಕೊಂಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಕುಟುಂಬದವರು ಪೊಲೀಸರಿಂದ ನಮಗೆ ನ್ಯಾಯ ದೊರೆತಿಲ್ಲ, ಸಿಐಡಿ ಗೆ ವಹಿಸಬೇಕೆಂದು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ವಿಚಾರ ಮಾಡಿ, ಕಾನೂನು ಇಲಾಖೆಯೊಂದಿಗೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುವುದು ಎಂದರು.