ನವದೆಹಲಿ, ಆ 11 (DaijiworldNews/HR): ನಿಯಮ ಉಲ್ಲಂಘನೆ, ದುರ್ನಡತೆ, ಧಿಕ್ಕರಿಸುವ ವರ್ತನೆಗಾಗಿ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಅವರನ್ನು ರಾಜ್ಯಸಭೆಯಿಂದ ರಾಜ್ಯಸಭಾ ಚೇರ್ಮನ್ ಹಾಗೂ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅನಿರ್ದಿಷ್ಟಾವಧಿಗೆ ಅಮಾನತು ಮಾಡಿದ್ದಾರೆ.
ದೆಹಲಿ ಸೇವಾ ಮಸೂದೆ ಬಿಲ್ಅನ್ನು ಸೆಲೆಕ್ಟ್ ಕಮಿಟಿಗೆ ಕಳಿಸಬೇಕು ಎನ್ನುವ ನಿಟ್ಟಿನಲ್ಲಿ ಸದಸ್ಯರ ಸಹಿ ಇರುವ ಪತ್ರವನ್ನು ಫೋರ್ಜರಿ ಮಾಡಿದ ಆರೋಪವನ್ನು ರಾಘವ್ ಚಡ್ಡಾ ಹೊತ್ತಿದ್ದರು.
ಇನ್ನು ವಿಶೇಷಾಧಿಕಾರಿ ಸಮಿತಿ ತನ್ನ ವರದಿಯನ್ನು ಸಲ್ಲಿಸುವವರೆಗೆ ರಾಘವ್ ಚಡ್ಡಾ ಅವರನ್ನು ರಾಜ್ಯಸಭೆಯಿಂದ ಅನಿರ್ದಿಷ್ಟಾವಧಿಗೆ ಅಮಾನತು ಮಾಡಲಾಗುತ್ತದೆ ಎಂದು ವರದಿ ತಿಳಿಸಿದೆ.
ತಮ್ಮ ಅನುಮತಿಯಿಲ್ಲದೆ ತಮ್ಮ ಹೆಸರನ್ನು ಆಗಸ್ಟ್ 7 ರಂದು ನಿರ್ಣಯದಲ್ಲಿ ರಾಘವ್ ಚಡ್ಡಾ ಸೇರಿಸಿದ್ದಾರೆ ಎಂದು ನಾಲ್ಕು ರಾಜ್ಯಸಭಾ ಸಂಸದರು ಹೇಳಿಕೊಂಡಿದ್ದರು. ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರು ಬುಧವಾರ ಈ ವಿಷಯವನ್ನು ಪರಿಶೀಲಿಸಲು ವಿಶೇಷಾಧಿಕಾರ ಸಮಿತಿಗೆ ಸಂಸದರ ದೂರುಗಳನ್ನು ಕಳುಹಿಸಿದ್ದು, ಇಂದು ರಾಘವ್ ಚಡ್ಡಾ ಅವರನ್ನು ರಾಜ್ಯಸಭೆಯಿಂದ ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಲಾಗಿದೆ.