ನವದೆಹಲಿ, ಆ 11(DaijiworldNews/Ak): ಫೇಸ್ಬುಕ್ನಲ್ಲಿ ಪರಿಚಯವಾದ ಗೆಳೆಯನಿಗಾಗಿ ಗಂಡ, ಇಬ್ಬರು ಮಕ್ಕಳನ್ನು ಬಿಟ್ಟು ಪಾಕಿಸ್ತಾನಕ್ಕೆ ತೆರಳಿ, ಪ್ರಿಯತಮ ನಸ್ರುಲ್ಲಾನನ್ನು ಮದುವೆಯಾದ ರಾಜಸ್ಥಾನದ ಅಂಜು ಮತ್ತೆ ಭಾರತಕ್ಕೆ ವಾಪಾಸಲಾಗಲು ಮುಂದಾಗಿದ್ದಾಳೆ.
ನಾನಿಲ್ಲಿ ಖುಷಿಯಿಂದ ಇಲ್ಲ ನನ್ನಿಂದ ತಪ್ಪಾಗಿದೆ.ಹಾಗಾಗಿ, ನಾನು ಭಾರತಕ್ಕೆ ವಾಪಸ್ ಬರುತ್ತೇನೆ” ಎಂಬುದಾಗಿ ಅಂಜು ಹೇಳಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.ಪಾಕಿಸ್ತಾನದಲ್ಲಿ ಎಲ್ಲವೂ ಚೆನ್ನಾಗಿದೆ. ನಾನು ಬೇರಾವುದೋ ಆಲೋಚನೆಗಳನ್ನು ಇಟ್ಟುಕೊಂಡು ಇಲ್ಲಿಗೆ ಬಂದಿದೆ, ಆದರೆ, ನಾನಿಲ್ಲಿ ಖುಷಿಯಿಂದ ಇಲ್ಲ. ನಾನು ಮಾಡಿದ ತಪ್ಪಿನ ಅರಿವಾಗಿದೆ.
ಪಾಕಿಸ್ತಾನಕ್ಕೆ ಬಂದಿರುವ ಹಿನ್ನಲೆ ಭಾರತದಲ್ಲಿ ನನ್ನ ಕುಟುಂಬಸ್ಥರು ಅವಮಾನಿತರಾಗಿದ್ದಾರೆ. ಅವರು ನನ್ನಿಂದ ತೊಂದರೆ ಅನುಭವಿಸಿದ್ದಾರೆ. ನನ್ನ ಮಕ್ಕಳ ಮುಖವನ್ನು ನೆನೆದರೆ ನನಗೆ ಸಂಕಟವಾಗುತ್ತಿದೆ. ಹೀಗಾಗಿ ನಾನು ಭಾರತಕ್ಕೆ ಹೋಗಲು ಬಯಸುತ್ತೇನೆ ಎಂಬುದಾಗಿ ಅಂಜು ಹೇಳಿದ್ದಾರೆ.
ನಾನೊಬ್ಬಳೇ ಎಲ್ಲವನ್ನೂ ಎದುರಿಸುತ್ತೇನೆ. ಮಾಧ್ಯಮದವರಿಗೆ ನಡೆದ ಎಲ್ಲ ಘಟನೆಯನ್ನು ಹೇಳುತ್ತೇನೆ. ಅವರ ಎಲ್ಲ ಪ್ರಶ್ನೆಗಳಿಗೂ ನನ್ನ ಬಳಿ ಉತ್ತರವಿದೆ ಎಂದು ಅಂಜು ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ನನ್ನ ಮೇಲೆ ಯಾವುದೇ ರೀತಿಯ ಒತ್ತಡ ಒತ್ತಾಯ ಹೇರಿಲ್ಲ ಎಂಬುದನ್ನು ಹೇಳಲು ಇಚ್ಛಿಸುತ್ತೇನೆ. ನಾನು ಪಾಕಿಸ್ತಾನಕ್ಕೆ ಬಂದಿದ್ದು ನನ್ನ ನಿರ್ಧಾರದಿಂದಲೇ ಹೊರತು ಯಾರ ಒತ್ತಾಯದ ಮೇರೆಗೆ ಅಲ್ಲ. ಮಾಧ್ಯಮಗಳ ಒತ್ತಡದಿಂದಾಗಿ ನಾನು ಪಾಕಿಸ್ತಾನಕ್ಕೆ ಬಂದ ಆರಂಭದಲ್ಲೇ ವಾಪಸಾಗಲು ಆಗಲಿಲ್ಲ. ನಾನು ನನ್ನ ಮಕ್ಕಳನ್ನು ನೋಡಬೇಕು ಅವರ ನೆನಪು ಕಾಡುತ್ತಿದೆ” ಎಂದು ದುಃಖ ತೋಡಿಕೊಂಡಿದ್ದಾರೆ. ಇತ್ತ ಪತಿ ಹಾಗೂ ಮಕ್ಕಳನ್ನು ಬಿಟ್ಟು ಪಾಕಿಸ್ತಾನಕ್ಕೆ ಓಡಿ ಹೋದ ಅಂಜು ನಮ್ಮ ಪಾಲಿಗೆ ಸತ್ತ ಹಾಗೆ ಎಂದು ಆಕೆಯ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರೇಮಿಗಾಗಿ ಪಾಕಿಸ್ತಾನಕ್ಕೆ ಹೋದ ಅಂಜು ಇಸ್ಲಾಂಗೆ ಮತಾಂತರವಾಗಿದ್ದಾರೆ. ಮತಾಂತರದ ಬಳಿಕವೇ ಅವರು ನಸ್ತುಲ್ಲಾನನ್ನು ಮದುವೆಯಾಗಿದ್ದು, ಈಗ ಅವರ ಹೆಸರು ಫಾತಿಮಾ ಆಗಿದೆ ಎನ್ನಲಾಗಿದೆ. ಅಂಜು ಹಾಗೂ ನಸ್ರುಲ್ಲಾ ಅವರ ಪ್ರಿ ವೆಡ್ಡಿಂಗ್ ಶೂಟ್ ವಿಡಿಯೊ ಕೂಡ ಈಗ ಭಾರಿ ವೈರಲ್ ಆಗಿದೆ. ಆದರೆ ಅಂಜು ಯಾವಾಗ ಭಾರತಕ್ಕೆ ಬರಲಿದ್ದಾರೆ ಅನ್ನುವ ಕುರಿತು ಮಾಹಿತಿ ಇಲ್ಲ.