ಲಕ್ನೋ, ಆ 09(DaijiworldNews/MS): ಮೊಬೈಲ್ ಚಾರ್ಜ್ ಹಾಕುವ ವೇಳೆ ವಿದ್ಯುತ್ ಶಾಕ್ ತಗುಲಿ 15 ವರ್ಷದ ಬಾಲಕ ಮೃತಪಟ್ಟಿದ್ದು, ಬಾಲಕನನ್ನು ರಕ್ಷಿಸಲು ಯತ್ನಿಸಿದಾಗ ಆತನ ತಾಯಿಗೂ ವಿದ್ಯುತ್ ಸ್ಪರ್ಶವಾಗಿ ಕೊನೆಯುಸಿರೆಳೆದ ಘಟನೆ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.
ಈ ಬಗ್ಗೆ ಪೊಲೀಸ್ ಅಧಿಕಾರಿ ಮಹೇಶ್ ಪಾಂಡೆ ಮಾತನಾಡಿ "ಭವಾನಿಪುರ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ತಾಯಿ-ಮಗ ಸಾವನ್ನಪ್ಪಿದ್ದಾರೆ" ಎಂದು ತಿಳಿಸಿದ್ದಾರೆ.
ರೋಹಿತ್ ಜೈಸ್ವಾಲ್ (15) ಬಾಲಕ ರಾತ್ರಿ ತನ್ನ ತಾಯಿ ರಾಮ್ ಸಹೇಲಿಯೊಂದಿಗೆ ತಮ್ಮ ಮನೆಯೊಳಗೆ ಮಲಗಿದ್ದರು.
ರಾತ್ರಿ ಎಚ್ಚರಗೊಂಡು ಮೋಬೈಲ್ ಚಾರ್ಜ್ ಮಾಡಲು ಹೋಗಿದ್ದ, ಆ ವೇಳೆ ರೋಹಿತ್ಗೆ ವಿದ್ಯುತ್ ಶಾಕ್ ಹೊಡೆದಿದೆ. ಇದನ್ನು ಕಂಡ ತಾಯಿ ಆತನನ್ನು ರಕ್ಷಿಸಲು ಯತ್ನಿಸಿದರಾದರೂ ಆಕೆಯೂ ಕೂಡ ವಿದ್ಯುತ್ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ನಂತರ ಕುಟುಂಬ ಸದಸ್ಯರು ಕೋಣೆಯಲ್ಲಿ ತಾಯಿ-ಮಗ ಇಬ್ಬರೂ ಶವವಾಗಿ ಬಿದ್ದಿರುವುದನ್ನು ನೋಡಿದ್ದಾರೆ. ಕುಟುಂಬದವರು ಶವಪರೀಕ್ಷೆಗೆ ನಿರಾಕರಿಸಿ ಅಂತಿಮ ವಿಧಿವಿಧಾನ ನೆರವೇರಿಸಿದ್ದಾರೆ ಎಂದು ವರದಿಯಾಗಿದೆ.