ನವದೆಹಲಿ, ಆ 09(DaijiworldNews/MS):ಕ್ವಿಟ್ ಇಂಡಿಯಾ ಚಳುವಳಿ ಸ್ಮರಣಾರ್ಥ ಇಲ್ಲಿನ ಕ್ರಾಂತಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಮಹಾತ್ಮಾ ಗಾಂಧಿ ಅವರ ಮರಿಮೊಮ್ಮಗ ತುಷಾರ್ ಗಾಂಧಿ ಅವರನ್ನು ಸಾಂತಾ ಕ್ರೂಸ್ ಪೊಲೀಸರು ಬುಧವಾರ ಬಂಧಿಸಿ ಬಿಡುಗಡೆ ಮಾಡಿದ್ದಾರೆ.
ಈ ಕುರಿತು ತುಷಾರ್ ಗಾಂಧಿ ಅವರೇ ಟ್ವಿಟರ್ ಮಾಹಿತಿ ಹಂಚಿಕೊಂಡಿದ್ದಾರೆ.
ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ನಾನು ಆಗಸ್ಟ್ 9ರ ಕ್ವಿಟ್ ಇಂಡಿಯಾ ದಿನದ ನೆನಪಿಗಾಗಿ ಕ್ರಾಂತಿ ಮೈದಾನದತ್ತ ಹೊರಟಾಗ ಸಾಂತಾಕ್ರೂಜ್ ಪೊಲೀಸರು ವಶಕ್ಕೆ ಪಡೆದಿರುವುದಾಗಿ ತುಷಾರ್ ಗಾಂಧಿ ಟ್ವೀಟ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಐತಿಹಾಸಿಕ ದಿನದಂದು ನನ್ನ ಮುತ್ತಜ್ಜ-ಮುತ್ತಜ್ಜಿ, ಬಾಪು ಹಾಗೂ ಬಾ (ಮಹಾತ್ಮಾ ಗಾಂಧಿ ಮತ್ತು ಕಸ್ತೂರ ಬಾ) ಅವರೂ ಬ್ರಿಟೀಷರಿಂದ ಬಂಧನಕ್ಕೊಳಗಾಗಿದ್ದರು ಎಂಬ ಬಗ್ಗೆ ನನಗೆ ಹೆಮ್ಮೆ ಇದೆ' ಎಂದು ಹೇಳಿದ್ದಾರೆ.
'ಠಾಣೆಯಿಂದ ತೆರಳಲು ಅನುಮತಿ ದೊರತ ತಕ್ಷಣವೇ ಕಾರ್ಯಕ್ರಮಕ್ಕೆ ತೆರಳುತ್ತೇನೆ. ಖಂಡಿತವಾಗಿಯೂ ಭಾರತ ಬಿಟ್ಟು ತೊಲಗಿ ಚಳವಳಿ ದಿನ ಮತ್ತು ಹುತಾತ್ಮರನ್ನು ಸ್ಮರಿಸುತ್ತೇನೆ' ಎಂದು ತಿಳಿಸಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ, 'ಹೋಗಲು ಈಗ ಅನುಮತಿ ಸಿಕ್ಕಿದೆ. ಕ್ರಾಂತಿ ಮೈದಾನಕ್ಕೆ ತೆರಳುತ್ತಿದ್ದೇನೆ' ಎಂದಿದ್ದು, 'ಕ್ರಾಂತಿ ಅಮರವಾಗಲಿ' (ಇನ್ಕ್ವಿಲಾಬ್ ಜಿಂದಾಬಾದ್) ಎಂದು ಬರೆದುಕೊಂಡಿದ್ದಾರೆ.