ನವದೆಹಲಿ,,ಆ 08 (DaijiworldNews/AK): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಂಸದೀಯ ಸದಸ್ಯತ್ವವನ್ನು ಪುನರ್ಸ್ಥಾಪಿಸಿದ ನಂತರ 12 ತುಘಲಕ್ ಲೇನ್ ಬಂಗಲೆಯನ್ನು ಮರು ಹಂಚಿಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಂಸದ ಸ್ಥಾನದಿಂದ ಅನರ್ಹಗೊಂಡ ನಂತರ ಅವರು ಈ ವರ್ಷದ ಏಪ್ರಿಲ್ನಲ್ಲಿ ಬಂಗಲೆಯನ್ನು ಖಾಲಿ ಮಾಡಿದ್ದರು. ಇದೀಗ ‘ಮೋದಿ’ ಉಪನಾಮ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಅವರ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದು, ಅವರ ಸಂಸದ ಸ್ಥಾನಮಾನ ಮರಳಿದ ಕಾರಣ, ಬಂಗಲೆಯನ್ನು ಅವರಿಗೆ ಮತ್ತೆ ಮಂಜೂರು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ಇಡೀ ಭಾರತ ನನ್ನ ಮನೆ ಎಂದು ಹೇಳಿದರು. 2004ರಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಅಮೇಠಿ ಕ್ಷೇತ್ರದಲ್ಲಿ ಗೆದ್ದ ನಂತರ ರಾಹುಲ್ಗೆ ಮೊದಲ ಬಾರಿಗೆ ಬಂಗಲೆ ಮಂಜೂರಾಗಿತ್ತು.
12 ತುಘಲಕ್ ಲೇನ್ನಲ್ಲಿರುವ ಬಂಗಲೆಯನ್ನು ಏಪ್ರಿಲ್ 22 ರೊಳಗೆ ಖಾಲಿ ಮಾಡುವಂತೆ ಲೋಕಸಭೆಯ ವಸತಿ ಸಮಿತಿಯು ರಾಹುಲ್ ಗಾಂಧಿಗೆ ನೋಟಿಸ್ ನೀಡಿತ್ತು.