ನವದೆಹಲಿ, ಆ 07 (DaijiworldNews/AK): ಏರುತ್ತಿರುವ ಹಣದುಬ್ಬರದ ಕುರಿತು ಕೇಂದ್ರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಬಡವರ ಮಾತನ್ನು ಕೇಳುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಕಳೆದ ಮಂಗಳವಾರ ರಾಹುಲ್ ಆಜಾದ್ಪುರ ಮಂಡಿಗೆ ಭೇಟಿ ನೀಡಿ ಕೆಲವು ತರಕಾರಿ ಮತ್ತು ಹಣ್ಣು ಮಾರಾಟಗಾರರನ್ನು ಭೇಟಿ ಮಾಡಿದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಕಾರ್ಮಿಕರು, ವ್ಯಾಪಾರಿಗಳು ಮತ್ತು ರೈತರನ್ನು ಭೇಟಿ ಮಾಡಿ ಅವರ ಕಷ್ಟ ವಿಚಾರಿಸಿದ್ದಾಗಿ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಮಂಡಿಯಲ್ಲಿ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಕೆಲಸ ಮಾಡುತ್ತಿದ್ದು ಕೂಲಿ ಕಾರ್ಮಿಕ ಜಟಾ ಶಂಕರ್ ಮನೆಗೆ ಹೋಗಲು, ಕುಟುಂಬವನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಅವನು ಹೇಗೆ ಹೋಗುತ್ತಾನೆ. ಕೆಲಸ ತಪ್ಪಿದರೆ, ಹಣ ಕಡಿತವಾಗುತ್ತದೆ. ಹೀಗಾಗಿ ಈ ಹಣದುಬ್ಬರದಿಂದಾಗಿ ಅವರು ಸಂಕಷ್ಟಕೀಡಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ನಷ್ಟದಿಂದಾಗಿ ವಾರದಲ್ಲಿ ಎರಡರಿಂದ ಮೂರು ರಾತ್ರಿ ಹಸಿವಿನಿಂದ ಮಲಗಬೇಕಾಗುತ್ತದೆ ಎಂದು ಅಂಗಡಿಯವರೊಬ್ಬರು ನನ್ನ ಬಳಿ ಹೇಳಿದರು. ದೇಶದ ಬಡವರ ಸಮಸ್ಯೆಗಳನ್ನು ಪರಿಹರಿಸುವ ಬದಲು ಸರ್ಕಾರವು ಅವರ ಮಾತನ್ನು ಕೇಳುತ್ತಿಲ್ಲ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.