ನವದೆಹಲಿ, ಆ 07 (DaijiworldNews/HR): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವ ಸ್ಥಾನವನ್ನು ಪುನಃಸ್ಥಾಪಿಸಲಾಗಿದ್ದು, ಇಂದಿನಿಂದ ಕಲಾಪದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಮೋದಿ ಉಪನಾಮ ಹೇಳಿಕೆಗೆ ಸಂಬಂಧಿಸಿ ಸೂರತ್ ನ್ಯಾಯಾಲಯವು ಕಾಂಗ್ರೆಸ್ ಮುಖಂಡ ರಾಹುಲ್ ಅವರಿಗೆ ವಿಧಿಸಿದ್ದ 2 ವರ್ಷಗಳ ಜೈಲು ಶಿಕ್ಷೆ ಪ್ರಕರಣಕ್ಕೆ ಸುಪ್ರಿಂಕೋರ್ಟ್ ತಡೆಯಾಜ್ಞೆ ವಿಧಿಸಿದ ಬೆನ್ನಲ್ಲೇ, ರಾಹುಲ್ ಸಂಸತ್ತ ಸದಸ್ಯತ್ವವನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಪುನಃಸ್ಥಾಪಿಸಿದ್ದಾರೆ.
ರಾಹುಲ್ ಗಾಂಧಿ ಅವರಿಗೆ ಗರಿಷ್ಠ ಶಿಕ್ಷೆ ವಿಧಿಸಲು ಅಧೀನ ನ್ಯಾಯಾಲಯವು ಸರಿಯಾದ ಕಾರಣ ನೀಡಿಲ್ಲ. ಹಾಗಾಗಿ, ಶಿಕ್ಷೆಗೆ ತಡೆಯಾಜ್ಞೆ ನೀಡಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟನೆ ನೀಡಿದೆ.
ಇನ್ನು ಕೋರ್ಟ್ ಆದೇಶ ಪ್ರತಿಯೊಂದಿಗೆ ಶುಕ್ರವಾರ ಲೋಕಸಭಾ ಕಾರ್ಯದರ್ಶಿ ಭೇಟಿ ಮಾಡಿದ್ದ ಕಾಂಗ್ರೆಸ್ ನಾಯಕರು, ರಾಹುಲ್ ಅನರ್ಹತೆ ಆದೇಶ ರದ್ದು ಮಾಡುವಂತೆ ಮನವಿ ಮಾಡಿದ್ದರು.