ಧಾರವಾಡ, ಆ 06 (DaijiworldNews/AK): ಕಾಂಗ್ರೆಸ್ ಎಲ್ಲ ಸಂದರ್ಭದಲ್ಲಿ ವಿರೋಧ ಮಾಡುತ್ತಿದೆ. ಸೆಂಟರ್ ವಿಸ್ತಾಗೆ ವಿರೋಧ ಮಾಡಿದ್ದರು. ಹೊಸ ಪಾರ್ಲಿಮೆಂಟ್ಗೆ ವಿರೋಧ ಮಾಡುತ್ತಿದೆ. ಕಾಂಗ್ರೆಸ್ ನಾಯಕರು ಸುಳ್ಳು ಹೇಳುವ ಸ್ಪರ್ಧೆಗಿಳಿದಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ
ಅಳ್ನಾವರದಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರು ನೈಸ್ ರಸ್ತೆ ಹಗರಣದ ಬಗ್ಗೆ ದಾಖಲೆ ನೀಡಿದರೆ ಅದನ್ನು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಧಾರವಾಡ-ಬೆಳಗಾವಿ ರೈಲು ಮಾರ್ಗ ವಿಳಂಬ ವಿಚಾರವಾಗಿ ಮಾತನಾಡಿದ ಕೇಂದ್ರ ಸಚಿವ, ಭೂಸ್ವಾಧೀನ ಪ್ರಕ್ರಿಯೆ ಆಗಬೇಕು. ಅರ್ಧಕ್ಕಿಂತ ಹೆಚ್ಚು ಭೂಮಿ ಕೊಡಬೇಕು. ಆಗ ಕಾಮಗಾರಿ ಆರಂಭಿಸಬಹುದು. ಇದಕ್ಕೆ ರಾಜ್ಯ ಸರ್ಕಾರ ಭೂಸ್ವಾಧೀನ ಮಾಡಿಕೊಡಬೇಕು. ಆದರೆ ರಸ್ತೆ ಮಾಡುವುದಕ್ಕೇ ಹಣ ಇಲ್ಲ ಅಂತಾ ಹೇಳುತ್ತಿದ್ದಾರೆ. ಗ್ಯಾರಂಟಿ ಕೊಡುವುದೇ ಸಾಕಾಗಿದೆ ಎಂದು ಸಚಿವರು ಹೇಳುತ್ತಿದ್ದಾರೆ. ವರ್ಗಾವಣೆ ದಂಧೆಗೆ ಇಳಿದಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಶಾಸಕರೇ ಸರ್ಕಾರ ಎಷ್ಟು ದಿನ ಇರುತ್ತೋ ಏನೋ ಎಂದು ಹೇಳಿದ್ದಾರೆ. ಹೀಗಾದರೆ ರಾಜ್ಯದ ಪರಿಸ್ಥಿತಿ ಹೇಗಿರಬೇಡ ಊಹಿಸಿ. ಇವರು ರಸ್ತೆಗಳ ಅಭಿವೃದ್ಧಿ ಮಾಡುತ್ತಿಲ್ಲ. ಹೀಗಾಗಿ ರಸ್ತೆಗಿಳಿದು ಹೋರಾಡಲು ನಮ್ಮ ಶಾಸಕರಿಗೆ ಕರೆ ನೀಡಿದ್ದೇನೆ. ಎಲ್ಲಿ ರಸ್ತೆ ಕೆಟ್ಟಿದೆಯೋ ಅಲ್ಲಿ ನಮ್ಮ ಶಾಸಕರು ಹೋರಾಟ ಮಾಡುತ್ತಾರೆ ಎಂದರು.
ಮೋದಿ ಉದ್ಯಮಿಗಳ ಸಾಲಮನ್ನಾ ಮಾಡಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ ಪ್ರಲ್ಹಾದ್ ಜೋಶಿ, ಉದ್ಯಮಿಗಳ ಹತ್ತಾರು ಕೋಟಿ ಸಾಲಮನ್ನಾ ಮಾಡಿದ್ದಾರೆ ಎಂದಿದ್ದಾರೆ. ಈ ರೀತಿ ಹೇಳುವ ನಿಮಗೆ ನಾಚಿಕೆ, ಮಾನ ಮರ್ಯಾದೆ ಇದೆಯಾ? ಉದ್ಯಮಿಗಳ ಸಾಲಮನ್ನಾ ಮಾಡಿರುವ ಆರೋಪವನ್ನು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸಾಬೀತುಮಾಡಲಿ. ಸಾಲಮನ್ನಾ ಮಾಡಿಲ್ಲ ಅಂತಾದರೆ ಇಬ್ಬರೂ ರಾಜಕೀಯ ನಿವೃತ್ತಿ ಪಡೆಯುತ್ತಾರಾ ಎಂದು ಸವಾಲು ಹಾಕಿದರು.