ಬೆಂಗಳೂರು ಆ 06 (DaijiworldNews/AK):ಚೆನ್ನೈನ ಮದ್ರಾಸ್ ಇಂಟರ್ನ್ಯಾಶನಲ್ ಸರ್ಕ್ಯೂಟ್ನಲ್ಲಿ ಶನಿವಾರ ನಡೆದ ಎಂಆರ್ಎಫ್ ಎಂಎಂಎಸ್ಸಿ ಎಫ್ಎಂಎಸ್ಸಿಐ ಇಂಡಿಯನ್ ನ್ಯಾಷನಲ್ ಮೋಟಾರ್ಸೈಕಲ್ ರೇಸಿಂಗ್ ಚಾಂಪಿಯನ್ಶಿಪ್ನ ಮೂರನೇ ಸುತ್ತಿನಲ್ಲಿ ಅಪಘಾತಕ್ಕೀಡಾಗಿ ಬೆಂಗಳೂರು ಮೂಲದ 13 ವರ್ಷದ ಕೊಪ್ಪರಂ ಶ್ರೇಯಸ್ ಹರೀಶ್ ದುರ್ಮರಣ ಹೊಂದಿದ್ದಾರೆ.
ಟರ್ನ್-1 ನಿಂದ ನಿರ್ಗಮಿಸಿದ ಶ್ರೇಯಸ್ ತಿರುವಿನಲ್ಲಿ ಆಯತಪ್ಪಿ ಬೈಕ್ ಉರುಳಿದ್ದು, ಈ ವೇಳೆ ಆತನ ತಲೆಗೆ ಹಾಕಲಾಗಿದ್ದ ಹೆಲ್ಮೆಟ್ ಕಳಚಿಕೊಂಡಿತ್ತು. ಹಿಂದಿನಿಂದ ಬರುತ್ತಿದ್ದ ಇನ್ನೊಬ್ಬ ಸ್ಪರ್ಧಿಯ ಬೈಕ್ ಶ್ರೇಯಸ್ ಮೇಲೆ ಹರಿದು ಮುಂದೆ ಸಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಶ್ರೇಯಸ್ನನ್ನು ಅಂಬುಲೆನ್ಸ್ನಲ್ಲಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಸ್ಪತ್ರೆ ತಲುಪುವಷ್ಟರಲ್ಲಿ ಸಾವನ್ನಪ್ಪಿದ್ದಾನೆ ಎಂದು ವರದಿಗಳು ತಿಳಿಸಿವೆ.
13 ವರ್ಷದ ಶ್ರೇಯಸ್ ಬೆಂಗಳೂರಿನ ಕೆನ್ಸ್ರಿ ಶಾಲೆಯಲ್ಲಿ ಓದುತ್ತಿದ್ದರು. ಚಿಕ್ಕ ವಯಸ್ಸಿನಿಂದಲೇ ಬೈಕ್ ರೇಸ್ನಲ್ಲಿ ಕ್ರೇಜ್ ಹೊಂದಿದ್ದ, ಶ್ರೇಯಸ್ ಪೆಟ್ರೋನಾಸ್ನ ರೂಕಿ ವಿಭಾಗದಲ್ಲಿ ಸ್ಪರ್ಧಿಸಿ ರಾಷ್ಟ್ರಮಟ್ಟ ಸೇರಿದಂತೆ ಸತತ 4 ಬಾರಿ ರೇಸ್ಗಳನ್ನು ಗೆದ್ದಿದ್ದರು ಎನ್ನಲಾಗಿದೆ. ಈ ಘಟನೆ ಬಳಿಕ ಮದ್ರಾಸ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ನಿಗದಿಯಾಗಿದ್ದ ಉಳಿದ ರೇಸ್ಗಳನ್ನು ರದ್ದುಗೊಳಿಸಿದೆ