ಕಲಬುರಗಿ, ಆ 05 (DaijiworldNews/SM): ಐದು ಗ್ಯಾರಂಟಿಗಳ ಜತೆಗೆ ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕವಾಗಿ ಮುಂದುವರೆಸಲಿದ್ದೇವೆ. ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ರೀತಿಯ ಹಣಕಾಸಿನ ಕೊರತೆಯಾಗಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ, ಸಾಂಕೇತಿಕವಾಗಿ ಶೂನ್ಯ ದರದ ಬಿಲ್ ವಿತರಿಸಿ ಮಾತನಾಡಿದ ಅವರು, ಐದು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಲಾಗುವುದು. ನುಡಿದಂತೆ ನಡೆಯುತ್ತೇವೆ ಎಂದರು. ವಿರೋಧ ಪಕ್ಷದವರು ಅದರಲ್ಲೂ ಬಿಜೆಪಿಯವರು ಐದು ಗ್ಯಾರಂಟಿ ಯೋಜನೆಗಳು ಜಾರಿಯಾಗಲ್ಲ. ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಟೀಕಿಸಿದ್ದರು. ಈಗ ಸ್ವತ: ಪ್ರಧಾನಿ ನರೇಂದ್ರ ಮೋದಿ ಅವರೇ ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆ ಜಾರಿಯಿಂದ ಕರ್ನಾಟಕದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣ ಇಲ್ಲ ಎಂದು ಟೀಕಿಸಿದ್ದಾರೆ. ಆದರೆ ಹಣದ ಕೊರತೆಯಿಲ್ಲ. ಎಂದಿನಂತೆ ಅಭಿವೃದ್ಧಿ ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ಘೋಷಿಸಿದರು. ನಾವು ಅಧಿಕಾರಕ್ಕೆ ಬಂದು ಎರಡೂವರೆ ತಿಂಗಳಲ್ಲಿ ಭರವಸೆಗಳನ್ನು ಈಡೇರಿಸಿದ್ದೇವೆ. ಅದಕ್ಕೆ ಪೂರಕವಾಗಿ ಬಜೆಟ್ನಲ್ಲಿ ಅನುದಾನವನ್ನೂ ಘೋಷಿಸಿದ್ದೇವೆ. ಪ್ರಧಾನಿ ಮೋದಿ ಅವರು ಹೇಳಿರುವಂತೆ, ಯೋಜನೆಗಳನ್ನು ಜಾರಿ ತಂದು ನಾವು ದಿವಾಳಿ ಆಗುವುದಿಲ್ಲ. ಹಿಂದೆ ಬಿಜೆಪಿ ಆಡಳಿತವಿದ್ದಾಗ ರಾಜ್ಯ ದಿವಾಳಿಯಾಗಿ, ನಿರುದ್ಯೋಗ ಸಮಸ್ಯೆ ಹೆಚ್ಚಿತ್ತು. ಈಗ ನಾವು ಜಾರಿಗೊಳಿಸಿರುವಂಥ ಗ್ಯಾರಂಟಿಗಳನ್ನು ಇಡೀ ದೇಶದಲ್ಲಿ ಜಾರಿ ತನ್ನಿ ಎಂದು ಪ್ರಧಾನಿಗೆ ಸವಾಲು ಹಾಕುತ್ತೇನೆ. ಗುಜರಾತ್ ಮಾಡಲ್ ಎಂದು ದೇಶದ ಜನರಿಗೆ ಭ್ರಮೆ ಹುಟ್ಟಿಸಿದ್ದರು. ಆದರೆ, ನಮ್ಮ ರಾಜ್ಯವನ್ನು ಗುಜರಾತ್ ಮಾಡಲು ನಾವು ಬಿಡುವುದಿಲ್ಲ. ನಮ್ಮದೇ ಆದ ಕರ್ನಾಟಕ ಮಾಡಲ್ ಮಾಡಿದ್ದೇವೆ. ನುಡಿದಂತೆ ನಡೆಯುವುದೇ ಕರ್ನಾಟಕ ಮಾಡಲ್”ಎಂದರು.