ಕುಣಿಗಲ್, ಆ 05 (DaijiworldNews/SM): ಹುಟ್ಟು ಹಬ್ಬದ ದಿನದಂದೇ ಬಾಲಕಿಯೋರ್ವಳು ಹಾವು ಕಚ್ಚಿ ಸಾವನಪ್ಪಿರುವ ಘಟನೆ ಕುಣಿಗಲ್ ತಾಲೂಕಿನ ಸಂತೆಮಾವತ್ತೂರು ಸಮೀಪದ ಪಂಚವಟಿ ತಾಂಡ್ಯದಲ್ಲಿ ಶನಿವಾರ ನಡೆದಿದೆ.
ಗ್ರಾಮದ ಶಂಕರ್ ನಾಯ್ಕ್ ಹಾಗೂ ಸವಿತಾ ಭಾಯಿ ಅವರ ಪುತ್ರಿ ಚೈತನ್ಯಭಾಯಿ(9) ಹುಟ್ಟು ಹಬ್ಬದ ದಿನದಂದೇ ಸಾವನಪ್ಪಿರುವ ನತದೃಷ್ಟ ಬಾಲಕಿ.
ಇಂದು ಬೆಳಗ್ಗೆ ಶಂಕರನಾಯ್ಕ್ ತನ್ನ ಮಗಳು ಚೈತನ್ಯಭಾಯಿ ಅವಳನ್ನು ತನ್ನ ಜಮೀನಿಗೆ ಕರೆದುಕೊಂಡು ಹೋಗಿ ಬಾಳೇ ತೋಟದಲ್ಲಿ ಕಳೆ ಕೀಳುತ್ತಿದ್ದ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ನಾಗರ ಹಾವು ಚೈತನ್ಯಭಾಯಿಯ ಎಡಗಾಲಿಗೆ ಕಚ್ಚಿದೆ, ಕೂಡಲೇ ಚೈತನ್ಯಭಾಯಿ ಕಿರುಚಿಕೊಂಡಿದ್ದಾಳೆ. ಇದನ್ನು ಗಮನಿಸಿದ ಬಾಲಕಿಯ ತಂದೆ ಹಾವನ್ನು ಸ್ಥಳದಲ್ಲೇ ಹೊಡೆದು ಹಾಕಿ, ಮಗಳನ್ನು ಕರೆದುಕೊಂಡು ಬಂದು ಗ್ರಾಮಸ್ಥರಿಗೆ ಮಾಹಿತಿ ತಿಳಿಸಿ ಬಳಿಕ ಕುಣಿಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆಸ್ಪತ್ರೆ ಸಾಗಿಸುವ ಮಾರ್ಗಮಧ್ಯ ಗವಿಮಠದ ಬಳಿ ಚೈತನ್ಯಭಾಯಿ ಹಸು ನೀಗಿದ್ದಾಳೆ. ಈ ಸಂಬಂಧ ಹುಲಿಯೂರುದುರ್ಗ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಬಾಲಕಿ ಕೈಯಲ್ಲಿ ಕೇಕ್ ಕತ್ತರಿಸಿ ಪೋಷಕರ ಆಕ್ರಂದನ : ಆ 05ರಂದು ಚೈತನ್ಯಭಾಯಿಯ ಹುಟ್ಟುಹಬ್ಬವಿದ್ದಿತ್ತು. ಮಗಳ ಹುಟ್ಟು ಹಬ್ಬ ಆಚರಣೆಗಾಗಿ ಮನೆಯವರು ಸಿದ್ದತೆಯನ್ನು ಮಾಡಿಕೊಂಡಿದ್ದರು. ಆದರೆ ವಿಧಿ ಆಟವೇ ಬೇರೆಯಾಗಿತ್ತು, ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ಬಾಲಕಿ ಹಾವು ಕಚ್ಚಿ ಇಹಲೋಕ ತ್ಯಜಿಸಿದ್ದಾಳೆ. ಇದರಿಂದ ನೊಂದ ಪೋಷಕರು ಬಾಲಕಿಯ ಶವದ ಕೈಯಿಂದಲ್ಲೇ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿ ತೀವ್ರ ಆಕ್ರಂದನ ವ್ಯಕ್ತಪಡಿಸಿದ್ದು, ನೆರೆದಿದ್ದ ಜನರು ಕಣ್ಣು ತೇವಗೊಳಿಸಿತ್ತು.