ಕಲಬುರಗಿ,ಆ 05 (DaijiworldNews/AK): ಈ ದೇಶ ಸುರಕ್ಷಿತವಾಗಿ ಉಳಿಯಬೇಕಾದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು. ಬಡವರ, ಮಹಿಳೆಯರ, ದೀನ ದಲಿತರ ಹಾಗೂ ಸಂವಿಧಾನದ ಉಳಿವಿಗಾಗಿ ಜನರು ಕಾಂಗ್ರೆಸ್ ಪಕ್ಷವನ್ನು ಆಶೀರ್ವದಿಸಬೇಕು ಎಂದು ಲೋಕಸಭಾ ವಿರೋಧಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಗೃಹ ಜ್ಯೋತಿ ಯೋಜನೆಯ ಚಾಲನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾದ ಐದು ಗ್ಯಾರಂಟಿಗಳ ಬಗ್ಗೆ ಇಡೀ ದೇಶದ ಜನರೇ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಶಿವಕುಮಾರ ನೇತೃತ್ವದಲ್ಲಿ ಈ ಗ್ಯಾರಂಟಿಗಳು ಜಾರಿಗೆ ಬರುತ್ತಿವೆ ಎಂದರು.
ಬಡವರಿಗಾಗಿ, ಯುವಕರಿಗಾಗಿ, ಕೂಲಿ ಕಾರ್ಮಿಕರಿಗಾಗಿ, ಮಹಿಳೆಯರಿಗಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗೆಲ್ಲ ಜಾರಿಗೆ ತಂದಿದೆ. ಅಂತಹ ಯೋಜನೆಗಳನ್ನು ಸಿಎಂ ಸಿದ್ದರಾಮಯ್ಯ ಈ ಹಿಂದಿನ ಅವಧಿಯಲ್ಲಿ ಜಾರಿಗೆ ತಂದರೂ ಕೂಡಾ ಜನರು ಯಾಕೋ ಆಶೀರ್ವಾದ ಮಾಡಲಿಲ್ಲ ಎಂದರು.
ಮನಸಿದ್ದರೆ ಮಾರ್ಗ ಸಿಗುತ್ತದೆ. ಯಾರು ಬಡವರ ಬಗ್ಗೆ ಚಿಂತನೆ ಮಾಡುತ್ತಾರೋ ಅವರು ಯೋಜನೆಗಳನ್ನು ಜಾರಿಗೆ ತರಲು ದುಡ್ಡು ಹುಡುಕುತ್ತಾರೆ ಎಂದು ಹೇಳಿ ಸಿಎಂ, ಡಿಸಿಎಂ ಹಾಗೂ ಇಂಧನ ಸಚಿವರಿಗೆ ಅಭಿನಂದನೆ ಸಲ್ಲಿಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ನುಡಿದಂತೆ ನಡೆದ ಸರ್ಕಾರ ಎಂದು ಪ್ರಶಂಸಿಸಿದ ಖರ್ಗೆ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಪ್ರತಿ ವರ್ಷ 2 ಕೋಟಿ ಉದ್ಯೋಗ, ವಿದೇಶದಿಂದ ಕಪ್ಪು ಹಣ ವಾಪಸ್ ತಂದು ಪ್ರತಿ ಕುಟುಂಬಕ್ಕೆ ಹದಿನೈದು ಲಕ್ಷ ಕೊಡುವುದಾಗಿ ಹೇಳಿದ್ದರು. ಹದಿನೈದು ಲಕ್ಷ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿ ಅವರು ತಮ್ಮ ಬಳಿ ಇರುವ ಇಂಟಲಿಜೆನ್ಸಿ ಮೂಲಕ ವರದಿ ತರಿಸಿಕೊಂಡು ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ಜಾರಿಗೆ ತರುತ್ತಿರುವ ಬಗ್ಗೆ ತಿಳಿದುಕೊಳ್ಳಲಿ ಎಂದು ಹೇಳಿದರು.ಕಲ್ಯಾಣ ಕರ್ನಾಟಕದ ಬಗ್ಗೆ ಕಾಳಜಿ ವಹಿಸುವಂತೆ ಸಿಎಂ ಹಾಗೂ ಡಿಸಿಎಂ ಗೆ ಹೇಳಿದ ಅವರು ಈ ಭಾಗದಿಂದ ನಿಮಗೆ ಯಾವಾಗಲೂ 25 ಸೀಟು ಬಂದಿವೆ. ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳು ಮಾನವ ಅಭಿವೃದ್ದಿ ಸೂಚ್ಯಂಕದಲ್ಲಿ ತಳಮಟ್ಟದಲ್ಲಿವೆ. ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.