ಕಲಬುರುಗಿ, ಆ 05 (DaijiworldNews/MS): ಸಚಿವ ಸ್ಥಾನದಿಂದ ವಂಚಿತರಾಗಿದ್ದರಿಂದ ಅಸಮಾಧಾನಗೊಂಡಿರುವ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಪುತ್ರ ಜೇವರ್ಗಿ ಕ್ಷೇತ್ರದ ಶಾಸಕ ಡಾ ಅಜಯ ಸಿಂಗ್ ಗೃಹಜ್ಯೋತಿ ಯೋಜನೆಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
ಈ ಬಗ್ಗೆ ತಮ್ಮ ಫೇಸ್ಬುಕ್ ಖಾತೆಯಲ್ಲಿ, "ಅವಕಾಶ ಕಿತ್ತುಕೊಳ್ಳಬಹುದೇ ಹೊರತು ಸಾಮರ್ಥ್ಯ, ಜನಪ್ರಿಯತೆಯನಲ್ಲ" ಎಂದು ಬರೆದುಕೊಂಡಿದ್ದಾರೆ.
200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಗೆ ಇಂದು ಕಲಬುರಗಿ ನಗರದಲ್ಲಿ ಚಾಲನೆ ನೀಡಲಾಯಿತು. ಆದರೆ ತಮ್ಮ ತವರು ಜಿಲ್ಲೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಭಾಗಿಯಾಗಿದ್ದರೂ ಡಾ.ಅಜಯ್ ಸಿಂಗ್ ಗೈರಾಗಿದ್ದಾರೆ.
ಅಜಯ್ ಸಿಂಗ್ ಹೊರತುಪಡಿಸಿ ಜಿಲ್ಲೆಯ ಉಳಿದೆಲ್ಲಾ ಕಾಂಗ್ರೆಸ್ ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.ಡಾ.ಅಜಯಸಿಂಗ್ ಅವರು ಸಚಿವ ಸ್ಥಾನದಿಂದ ವಂಚಿತರಾದ ನಂತರ ಕಾಂಗ್ರೆಸ್ ಪಕ್ಷದ ವಾಟ್ಸಾಪ್ ಗ್ರೂಪ್ ದಿಂದ ಹೊರ ಹೋಗಿರುವ ನಡುವೆ ಈಗ ಪ್ರಮುಖವಾಗಿ ನಡೆದಿರುವ ಕಾರ್ಯಕ್ರಮದಿಂದ ದೂರ ಉಳಿದಿರುವುದು ನಿಜಕ್ಕೂ ಹಲವು ಚರ್ಚೆಗೆ ಎಡೆ ಮಾಡಿ ಕೊಟ್ಟಿದೆ