ಬೆಂಗಳೂರು,ಆ 05 (DaijiworldNews/AK): ವರ್ತೂರಿನಲ್ಲಿ 2ನೇ ತರಗತಿ ಯಲ್ಲಿ ವ್ಯಾಸಂಗ ಮಾಡುತ್ತಿದ್ದ 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ವಿಕೃತಿ ಮೆರೆದ ಪ್ರಾಂಶುಪಾಲ ಪೊಲೀಸ್ ವಶವಾಗಿದ್ದಾನೆ.
ಗುಂಜೂರಿನ ಬೆಥೆಲ್ಸ್ ಬ್ಯಾಪ್ಟಿಸ್ಟ್ ಅಕಾಡೆಮಿ ಶಾಲೆಯ ಪ್ರಾಂಶುಪಾಲ ವರ್ತೂರಿನ ನಿವಾಸಿ ಲ್ಯಾಂಬರ್ಟ್ ಪುಷ್ಪರಾಜ್ (65) ಬಂಧಿತ ಆರೋಪಿ.
ಗುಂಜೂರಿನ ಬೆತೆಲ್ ಬ್ಯಾಪಿಸ್ಟ್ ಅಕಾಡೆಮಿಯಲ್ಲಿ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿಯು ನರ ದೌರ್ಬಲ್ಯ ಮೈಲ್ಡ್ ಡೈಸ್ಲೇಕ್ಸಿಯಾ ಕಾಯಿಲೆ ಯಿಂದ ಬಳಲುತ್ತಿದ್ದಳು. ಆ.3ರಂದು ಬೆಳಗ್ಗೆ 8.30ಕ್ಕೆ ಎಂದಿನಂತೆ ಶಾಲೆಗೆ ತೆರಳಿದ್ದಾಳೆ. ಶಾಲೆಯ ಪ್ರಾಂಶುಪಾಲ ಲ್ಯಾಂಬರ್ಟ್ ಪುಷ್ಪ ರಾಜ್ ಬಾಲಕಿಯನ್ನು ಆತನ ಕೊಠಡಿಗೆ ಕರೆದುಕೊಂಡು ಹೋಗಿ ಬೆಡ್ ಮೇಲೆ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದರು. ಬಳಿಕ ಬಾಗಿಲು ಹಾಗೂ ಕಿಟಕಿಯ ಪರದೆ ಮುಚ್ಚಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಬಾಲಕಿ ಅಳಲು ಪ್ರಾರಂಭಿಸಿದಾಗ ಪ್ರಾಂಶುಪಾಲ ಹೊಡೆಯುವುದಾಗಿ ಬೆದರಿಸಿದ್ದ ಎನ್ನಲಾಗಿದೆ. ಬಳಿಕ ಪ್ರತಿದಿನ ಇದೇ ರೀತಿ ಮಾಡುವುದಾಗಿ ಹೇಳಿ ಬಾಲಕಿಗೆ ಕೇಕ್ ನೀಡಿದಾಗ ಬಾಲಕಿ ಅಳುವುದನ್ನು ನಿಲ್ಲಿಸಿ ಮನೆಗೆ ಹೋಗಿದ್ದಳು. ಮನೆಗೆ ವಾಪಸ್ಸಾಗಿ ಪಾಲಕರ ಬಳಿ ಹೊಟ್ಟೆ ನೋವು ಎಂದು ಬಾಲಕಿ ಹೇಳಿಕೊಂಡಿದ್ದಳು. ಸಾಮಾನ್ಯ ಹೊಟ್ಟೆ ನೋವು ಇದ್ದಿರಬಹುದು ಎಂದು ಪಾಲಕರು ಸುಮ್ಮನಾಗಿದ್ದರು. ಬಾಲಕಿಗೆ ಸ್ನಾನ ಮಾಡಿಸಿ ಸ್ನಾನದ ಕೋಣೆಯಿಂದ ಬಂದಾಗ ಖಾಸಗಿ ಭಾಗದಲ್ಲಿ ರಕ್ತಸ್ರಾವವಾಗಿರುವುದು ಕಂಡು ಬಂದಿತ್ತು. ಪೋಷಕರು ಈ ಬಗ್ಗೆ ವಿಚಾರಿಸಿದಾಗ ನಡೆದ ಸಂಗತಿಯನ್ನು ಬಾಲಕಿ ಹೇಳಿದ್ದಾಳೆ.
ಬಾಲಕಿ ತಾಯಿ ಈ ಕುರಿತು ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ವಿರುದ್ದ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.