ಮುಂಬೈ, ಆ 05 (DaijiworldNews/MS): ಮಹಾರಾಷ್ಟ್ರದ ಥಾಣೆಯಲ್ಲಿರುವ ವಿದ್ಯಾ ಪ್ರಸಾರಕ್ ಮಂಡಲ್ ಕಾಲೇಜಿನಲ್ಲಿ ನ್ಯಾಷನಲ್ ಕೆಡೆಟ್ ಕಾರ್ಪ್ಸ್(ಎನ್ಸಿಸಿ) ವಿದ್ಯಾರ್ಥಿಗಳನ್ನು ಹಿರಿಯ ವಿದ್ಯಾರ್ಥಿಯೊರ್ವ ಅಮಾನುಷವಾಗಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಎನ್ಸಿಸಿ ವಿದ್ಯಾರ್ಥಿ ವಿರುದ್ದ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಎನ್ಸಿಸಿ ತರಭೇತಿ ವೇಳೆ 8 ಮಂದಿ ಎನ್ಸಿಸಿ ಕಿರಿಯ ವಿದ್ಯಾರ್ಥಿಗಳು ಶಿಕ್ಷೆಯ ಭಾಗವಾಗಿ ಮಳೆಯಲ್ಲಿ ಕೆಸರಿನಲ್ಲಿ ತಲೆ ಬಾಗಿಸ ಕೈಗಳನ್ನು ಹಿಂದಕ್ಕೆ ಕಟ್ಟಿ ಕುಳಿತಿದ್ದು ಹಿರಿಯ ಎನ್ಸಿಸಿ ತರಬೇತುದಾರನು ಈ ವಿದ್ಯಾರ್ಥಿಗಳನ್ನು ದೊಣ್ಣೆಯಿಂದ ರಭಸವಾಗಿ ಥಳಿಸಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ವಿದ್ಯಾರ್ಥಿಗಳು ಸಹಾಯಕ್ಕಾಗಿ ಅಳುತ್ತಿರುವಂತೆಯೇ ಅಮಾನವೀಯ ಶಿಕ್ಷೆ ನೀಡುತ್ತಿರುವ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಶುಕ್ರವಾರ ರಾತ್ರಿ ಥಾಣೆ ನಗರ ಪೊಲೀಸ್ ಠಾಣೆಯಲ್ಲಿ ಹಿರಿಯ ವಿದ್ಯಾರ್ಥಿಯ ವಿರುದ್ದ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧಪಟ್ಟಂತೆ ಹಿರಿಯ ವಿದ್ಯಾರ್ಥಿಯನ್ನು ಅಮಾನತುಗೊಳಿಸಲಾಗಿದೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ