ವಾರಣಾಸಿ, ಆ 04 (DaijiworldNews/MS): ಅಲಹಾಬಾದ್ ಹೈಕೋರ್ಟ್ನಿಂದ ಆದೇಶ ಹೊರಬಿದ್ದ ಬೆನ್ನಲ್ಲೇ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ತಂಡವು ಬಿಗಿ ಭದ್ರತೆಯೊಂದಿಗೆ ಜ್ಞಾನವಾಪಿ ಸಂಕೀರ್ಣದ ಸಮಗ್ರ ವೈಜ್ಞಾನಿಕ ಸಮೀಕ್ಷೆ ಕಾರ್ಯ ಆರಂಭಿಸಿದೆ.
ಎಎಸ್ಐ ತಂಡ ಶುಕ್ರವಾರ ಬೆಳಗ್ಗೆ ಉತ್ತರ ಪ್ರದೇಶದ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ಆವರಣಕ್ಕೆ ಆಗಮಿಸಿತು. ಬಿಗಿ ಭದ್ರತೆಯ ನಡುವೆ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಯನ್ನು ಪ್ರಾರಂಭಿಸಿತು.
ಬೆಳಗ್ಗೆ 7 ಗಂಟೆಗೆ ಆರಂಭವಾದ ಸಮೀಕ್ಷೆ ಮಧ್ಯಾಹ್ನ 12ರವರೆಗೆ ನಡೆಯಲಿದೆ. ಬಿಗಿ ಭದ್ರತಾ ಕ್ರಮಗಳ ಅಡಿಯಲ್ಲಿ, ಎಎಸ್ಐ ತಂಡದ ಸದಸ್ಯರು, ಮಸೀದಿಗೆ ಸಂಬಂಧಿಸಿದ ಕಾನೂನು ವಿವಾದದಲ್ಲಿ ತೊಡಗಿರುವ ಹಿಂದೂ ಅರ್ಜಿದಾರರ ಪ್ರತಿನಿಧಿಗಳು ಸಮೀಕ್ಷೆಯ ಸಮಯದಲ್ಲಿ ಸಂಕೀರ್ಣದೊಳಗೆ ಹಾಜರಿದ್ದರು.
ಎಐಎಂ ಸಮಿತಿಯ ಸದಸ್ಯರು ಸಮೀಕ್ಷೆಯನ್ನು ಬಹಿಷ್ಕರಿಸಿದ್ದಾರೆ. ಸಮೀಕ್ಷೆಗೆ ಎಎಸ್ಐ ತಂಡದೊಂದಿಗೆ ತೆರಳಬೇಕಿದ್ದ ಸಮಿತಿಯ ಪ್ರತಿನಿಧಿಗಳು ಗೈರಾಗಿದ್ದರು.