ನವದೆಹಲಿ, ಆ 3 (DaijiworldNews/AK): ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಇದೀಗ ಹೊಸ ಸಂಕಷ್ಟ ಎದುರಾಗಿದೆ. ಗೊಂಡಾದಲ್ಲಿರುವ ಅವರ ಕಂಪನಿಯು ಅಕ್ರಮ ಮರಳು ಗಣಿಗಾರಿಕೆ ಮತ್ತು ಖನಿಜಗಳ ಸಾಗಾಣಿಕೆ ನಡೆಸಿ ಸರಯು ನದಿಗೆ ಹಾನಿ ಉಂಟು ಮಾಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶಿಸಿದೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಪ್ರಧಾನ ಪೀಠವು ಅರಣ್ಯ ಸಚಿವಾಲಯ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ಸ್ವಚ್ಛ ಗಂಗಾ ರಾಷ್ಟ್ರೀಯ ಮಿಷನ್, ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಗೊಂಡ ಜಿಲ್ಲಾ ಮ್ಯಾಜಿಸ್ಟ್ರೇಟ್ನ್ನು ಒಳಗೊಂಡ ಜಂಟಿ ಸಮಿತಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಪ್ರಧಾನ ಪೀಠವು ರಚಿಸಿದೆ. ಬಳಿಕ ಪ್ರಕರಣದ ಬಗ್ಗೆ ಒಂದು ವಾರದೊಳಗೆ ಸಮಿತಿಯು ಸಭೆ ನಡೆಸಿ , ಬಳಿಕ ತನಿಖೆ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಿದೆ.
ನ್ಯಾಯಮೂರ್ತಿ ಅರುಣ್ ಕುಮಾರ್ ತ್ಯಾಗಿ ಮತ್ತು ಡಾ. ಎ ಸೆಂಥಿಲ್ ವೇಲ್ ಅವರನ್ನೊಳಗೊಂಡ ದೆಹಲಿಯ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಪ್ರಧಾನ ಪೀಠವು ತನ್ನ ಆದೇಶದಲ್ಲಿ ನಿರ್ದೇಶನ ನೀಡಿದೆ.
ಮಜರತ್, ಜೈತ್ಪುರ, ನವಾಬ್ಗಂಜ್, ತಹಸಿಲ್ ತರಬ್ಗಂಜ್ ಪ್ರದೇಶಗಳಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಕಂಪನಿ ಅಕ್ರಮ ಗಣಿಗಾರಿಕೆ ನಡೆಸಿದೆ. ಪ್ರತಿದಿನ 700ಕ್ಕೂ ಹೆಚ್ಚು ಓವರ್ಲೋಡ್ ಮಾಡಿದ ಟ್ರಕ್ಗಳ ಮೂಲಕ ಅಕ್ರಮವಾಗಿ 20 ಲಕ್ಷ ಕ್ಯೂಬಿಕ್ ಮೀಟರ್ ಅಳತೆಯ ಮರಳು ಮತ್ತು ಖನಿಜಗಳನ್ನು ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ. ಅಕ್ರಮ ಗಣಿಗಾರಿಕೆಯಿಂದ ಪಟ್ಪರ್ ಗಂಜ್ ಸೇತುವೆ ಮತ್ತು ರಸ್ತೆಗೆ ಹಾನಿಯಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದ್ದು, ಎರಡು ತಿಂಗಳೊಳಗೆ ಈ ಬಗ್ಗೆ ಸಮಿತಿ ವರದಿ ಸಲ್ಲಿಸುವಂತೆ ಹಸಿರು ನ್ಯಾಯಾಲಮಂಡಳಿ ಸೂಚಿಸಿದೆ.