ಬೆಂಗಳೂರು, ಆ 02 (DaijiworldNews/SM): ಕರ್ನಾಟಕದ ಮಾದರಿ ಆಡಳಿತ ಇಡೀ ದೇಶಕ್ಕೆ ಬೇಕು ಎಂದು ಪ್ರತಿಪಾದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವ ಮೊದಲು ನಿಮ್ಮ ಮತ್ತು ಬಿಜೆಪಿಯ ನಿಲುವನ್ನು ಸ್ಪಷ್ಟಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.
ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಸ್ವಾರ್ಥಕ್ಕಾಗಿ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೇಂದ್ರದ ಎನ್ ಡಿಎ ಸರ್ಕಾರ ಮತ್ತು ಬಿಜೆಪಿ ಆಡಳಿತವಿರುವ ಕೆಲವು ರಾಜ್ಯಗಳಲ್ಲಿ ಘೋಷಿಸಿದ ಕೆಲವು 'ಉಚಿತ ಯೋಜನೆಗಳನ್ನು' ಎತ್ತಿ ತೋರಿಸಿದ್ದು ಈ ವಿಚಾರದಲ್ಲಿ ಧ್ವಂಧ್ವ ನಿಲುವೇಕೆ ಎಂದು ಪ್ರಧಾನಿಯನ್ನು ಪ್ರಶ್ನಿಸಿದರು.
ಕಾಂಗ್ರೆಸ್ ಗ್ಯಾರಂಟಿ ಘೋಷಣೆಗಳನ್ನು ನೀಡುವ ಮೂಲಕ ದಕ್ಷಿಣ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಯಶಸ್ವಿಯಾಗಿದೆ. ಆದರೆ ಈ ಪ್ರಕ್ರಿಯೆಯಲ್ಲಿ ಅದು ಜನರ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸಿದೆ. ಇನ್ನು ಸಿದ್ದರಾಮಯ್ಯ ಸರ್ಕಾರ ರಾಜ್ಯದ ಬೊಕ್ಕಸ ಖಾಲಿಯಾಗಿದೆ ಮತ್ತು ಅಭಿವೃದ್ಧಿಗೆ ಹಣವಿಲ್ಲ ಎಂದು ಒಪ್ಪಿಕೊಂಡಿದೆ ಎಂದು ಪ್ರಧಾನಿ ಆರೋಪಿಸಿದ್ದರು.