ಬೆಂಗಳೂರು, ಆ 02 (DaijiworldNews/AK):ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಡಿದ ಮಹಾತ್ಮಾ ಗಾಂಧೀಜಿ ಹುಟ್ಟಿದ ದೇಶದಲ್ಲಿ ಬಿಜೆಪಿ ವರ್ಣಭೇದ ನೀತಿಯನ್ನು ಪೋಷಿಸುತ್ತಿರುವುದು ನಿಜಕ್ಕೂ ದುರಾದೃಷ್ಟಕರ ಎಂದು ಸಚಿವ ಸಿ ಈಶ್ವರ ಖಂಡ್ರೆ ವಿಷಾದ ವ್ಯಕ್ತಪಡಿಸಿದ್ದಾರೆ.
“ನಮ್ಮ ಭಾಗದ ಜನರು ಸುಟ್ಟು ಕರಕಲಾಗಿರುತ್ತಾರೆ ಖರ್ಗೆ ಅವರನ್ನು ನೋಡಿದರೆ ಇದು ಗೊತ್ತಾಗುತ್ತದೆ’ಎಂದು ಹೇಳುವ ಮೂಲಕ ಆರಗ ಜ್ಞಾನೇಂದ್ರ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮತ್ತು ದಲಿತ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಷ್ಟೇ ಅಲ್ಲದೆ ಕಲ್ಯಾಣ ಕರ್ನಾಟಕದ ಜನತೆಗೆ ಅವಮಾನ ಮಾಡಿದ್ದಾರೆ. ಇದು ಮಾಜಿ ಸಚಿವರ ಘನತೆಗೆ ಶೋಭೆ ತರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮ ಒಂದರ ಸಂವಾದದ ವೇಳೆ ಕೆಲವರು ಕಸ್ತೂರಿರಂಗನ್ ವರದಿ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ತಾವು ಯಾವುದೇ ಹಂತದಲ್ಲೂ “ಕಸ್ತೂರಿ ರಂಗನ್ ವರದಿ ಜಾರಿಗೆ ಸರ್ಕಾರ ಬದ್ಧ’’ ಎಂದು ಹೇಳಿರುವುದಿಲ್ಲ. ನನ್ನ ಹೇಳಿಕೆಯನ್ನ ತಿರುಚಿದ್ದಾರೆ. ಇದಕ್ಕೆ ಬೀದರ್ನಲ್ಲಿ ಸ್ಪಷೀಕರಣ ನೀಡಿದ್ದೇನೆ. ಸೋಮವಾರ ಮತ್ತೊಮ್ಮೆ ಸ್ಪಷ್ಟೀಕರಣ ಹೇಳಿಕೆ ಬಿಡುಗಡೆ ಮಾಡಿದ್ದು, ಇದು ಎಲ್ಲ ಮಾಧ್ಯಮದಲ್ಲೂ ಪ್ರಕಟವಾಗಿದೆ. ಹೀಗಿದ್ದೂ, ಬಿಜೆಪಿ ರಾಜಕೀಯ ಲಾಭಕ್ಕಾಗಿ ಪ್ರತಿಭಟನೆ ನಡೆಸಿರುವುದು ಅರ್ಥಹೀನ ಎಂದು ಹೇಳಿದರು.
ಆರಗ ಜ್ಞಾನೇಂದ್ರ ಅವರು ನಮ್ಮ ಕಲ್ಯಾಣ ಕರ್ನಾಟಕದಲ್ಲಿ ಮರಗಳಿಲ್ಲ ನೆರಳಿಲ್ಲ ನಮ್ಮ ತಲೆಕೂದಲೇ ನೆರಳು ಎಂದೆಲ್ಲಾ ತುಚ್ಛವಾಗಿ ಮಾತನಾಡಿರುವುದು ಅವರ ಕೀಳು ಸ್ವಾಭಾವ ಬಿಂಬಿಸುತ್ತದೆ ಎಂದರು. ಅವರು ಮಲ್ಲಿಕಾರ್ಜುನ ಖರ್ಗೆ ಹಾಗೂ ತಮಗಷ್ಟೇ ಅಲ್ಲದೆ ಇಡೀ ಕಲ್ಯಾಣ ಕರ್ನಾಟಕದ ಜನತೆಯ ಬೇಷರತ್ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದ್ದಾರೆ.