ಭುವನೇಶ್ವರ, ಆ 02 (DaijiworldNews/AK):ಒಡಿಶಾದ ಬಾಲಸೋರ್ನಲ್ಲಿ ರೈಲು ದುರಂತ ಸಂಭವಿಸಿ ಎರಡು ತಿಂಗಳು ಕಳೆದಿದೆ. ಆದರೂ ಭುವನೇಶ್ವರದ ಏಮ್ಸ್ ಆಸ್ಪತ್ರೆಯಲ್ಲಿ ಇರಿಸಲಾದ 29 ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಎಐಐಎಂಎಸ್ನ ವೈದ್ಯಕೀಯ ಅಧೀಕ್ಷಕ ದಿಲೀಪ್ ಕುಮಾರ್ ಪರಿದಾ ಹೇಳಿದ್ದಾರೆ.
ಆಸ್ಪತ್ರೆಯಲ್ಲಿ 162 ದೇಹಗಳನ್ನು ಇರಿಸಲಾಗಿತ್ತು. ಆದರಲ್ಲಿ 113 ಮೃತದೇಹಗಳ ಗುರುತು ಪತ್ತೆಯಾಗಿದ್ದು ಅವುಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಉಳಿದ ಮೃತ ದೇಹಗಳಿಗಾಗಿ ಡಿಎನ್ಎ ಪರೀಕ್ಷೆ ನಡೆಸಲಾಗಿದೆ. ಇನ್ನೂ ಹೆಚ್ಚಿನ ಮಾದರಿಗಳ ಪರೀಕ್ಷೆ ನಡೆಸಲಾಗುತ್ತಿದೆ. ಖಚಿತ ವರದಿಯ ಬಳಿಕವಷ್ಟೆ ಮೃತದೇಹಗಳನ್ನು ಹಸ್ತಾಂತರಿಸಲಾಗುವುದು. ಅಲ್ಲದೇ ಡಿಎನ್ಎ ಪರೀಕ್ಷೆ ಬಳಿಕವೂ ಗುರುತು ಪತ್ತೆಯಾಗದ ಮೃತದೇಹಗಳ ಸಂಸ್ಕಾರದ ಬಗ್ಗೆ ಸರ್ಕಾರವೇ ತೀರ್ಮಾನ ಕೈಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ಜೂನ್ 2 ರಂದು ಕೋರಮಂಡಲ್-ಚೆನ್ನೈ ಎಕ್ಸ್ಪ್ರೆಸ್, ಯಶವಂತಪುರ-ಹೌರಾ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ಮತ್ತು ಸರಕು ಸಾಗಣೆ ರೈಲು ಬಹನಾಗಾ ಬಜಾರ್ ರೈಲು ನಿಲ್ದಾಣದ ಬಳಿ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ 295 ಜನರು ಸಾವನ್ನಪ್ಪಿದ್ದರು. ಸಿಗ್ನಲ್ ವೈಫಲ್ಯವೇ ಬಾಲಸೋರ್ ದುರಂತಕ್ಕೆ ಕಾರಣ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದರು.