ಬೆಂಗಳೂರು, ಆ 02 (DaijiworldNews/AK):ಉಡುಪಿ ಕಾಲೇಜಿನ ಘಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೇರಳ ಫೈಲ್ಸ್ ಸಿನಿಮಾ ಮಾದರಿಯ ಕೃತ್ಯ ಎಂದು ಹೇಳಿಕೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಬಿಜೆಪಿಯ ಔಟ್ ಗೋಯಿಂಗ್ ಅಧ್ಯಕ್ಷ/ವಿದೂಷಕ ಕಟೀಲ್ ಉಡುಪಿ ಪ್ರಕರಣವನ್ನು ಕೇರಳ ಫೈಲ್ಸ್ಗೆ ಹೋಲಿಸಿದ್ದಾರೆ. ಹಾಗಾದರೆ ಇವರದ್ದೇ ಕ್ಷೇತ್ರದ ವಿಟ್ಲದಲ್ಲಿ ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಸಂಘಪರಿವಾರಕ್ಕೆ ಸೇರಿದ 3 ಯುವಕರಿಂದ ನಡೆದಿರುವ ನಿರಂತರ ಅತ್ಯಾಚಾರ ಯಾವ ಫೈಲ್ಸ್? ಇದನ್ನು ಮಂಗಳೂರು ಫೈಲ್ಸ್ ಎಂದು ಕರೆಯಬಹುದೇ? ಎಂದು ಪ್ರಶ್ನಿಸಿದ್ದಾರೆ.
ಉಡುಪಿ ಪ್ರಕರಣವನ್ನು ರಾದ್ಧಾಂತ ಮಾಡಿದ ಬಿಜೆಪಿಯವರು, ವಿಟ್ಲದಲ್ಲಿ ಅಪ್ರಾಪ್ತ ದಲಿತ ಬಾಲಕಿಯ ಮೇಲೆ ನಡೆದಿರುವ ಅತ್ಯಾಚಾರದ ಬಗ್ಗೆ ಯಾಕೆ ಬಾಯಿ ಬಿಡುತ್ತಿಲ್ಲ? ಆರೋಪಿಗಳು ಇವರ ಸಂಘಟನೆಗೆ ಸೇರಿದವರು ಎನ್ನುವ ಕಾರಣಕ್ಕಾಗಿ ಮೌನವೇ? ಬಿಜೆಪಿಯವರ ಪ್ರಕಾರ ಅಪರಾಧಿಗಳ ಧರ್ಮದ ಆಧಾರದ ಮೇಲೆ ಆ ಪ್ರಕರಣದ ತೀವ್ರತೆ ಮತ್ತು ಗುರುತ್ವ ನಿರ್ಧಾರವಾಗುತ್ತದೆಯೇ? ಎಂದು ಕಿಡಿಕಾರಿದ್ದಾರೆ.
ಗುಜರಾತ್ ಗಲಭೆ ನಡೆಯುವಾಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿತ್ತು. ಈಗ ಮಣಿಪುರದಲ್ಲಿ ಗಲಭೆ ನಡೆಯುತ್ತಿರುವಾಗಲೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇದೆ. ಕನಿಷ್ಠ ಪಕ್ಷ ಅಂದು ಪ್ರಧಾನಿಯಾಗಿದ್ದ ವಾಜಪೇಯಿ ಅವರು ಮೋದಿಯವರಿಗೆ 'ರಾಜಧರ್ಮ' ಪಾಲಿಸುವಂತೆ ಹೇಳಿದ್ದರು. ಈಗ ಮತ್ತೊಮ್ಮೆ ಮೋದಿಯವರಿಗೆ ರಾಜಧರ್ಮ ಪಾಲಿಸುವಂತೆ ಹೇಳಲು ಬಿಜೆಪಿಗಯಲ್ಲಿ ಯಾರಿಗೆ ತಾಕತ್ತಿದೆ? ಎಂದು ಟ್ವೀಟ್ ಮೇಲೆ ಟ್ವೀಟ್ ಹಾಕಿ ತಿರುಗೇಟು ನೀಡಿದ್ದಾರೆ.