ಬೆಂಗಳೂರು, ಆ 02 (DaijiworldNews/HR): ಗ್ಯಾರಂಟಿ ಹೆಸರಿನಲ್ಲಿ ಕಾಂಗ್ರೆಸ್ ಸರಕಾರವು ಜನರನ್ನು ಲೂಟಿ ಮಾಡುತ್ತಿದ್ದು, ಇದೀಗ ಬೆಲೆ ಏರಿಕೆಯ ಮೂಲಕ 6ನೇ ಗ್ಯಾರಂಟಿ ಘೋಷಿಸಿದೆ ಎಂದು ಬಿಜೆಪಿ ಟೀಕಿಸಿದೆ.
ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹಾಗೂ ವಿಧಾನಪರಿಷತ್ ಸದಸ್ಯ ಎನ್. ವಿಕುಮಾರ್, 5 ಗ್ಯಾರಂಟಿಗಳಿಗೆ 50 ಸಾವಿರ ಕೋಟಿ ಖರ್ಚು ಮಾಡುವುದಾಗಿ ಸಿಎಂ ಹೇಳಿದ್ದಾರೆ. ಈಗಾಗಲೇ ಜುಲೈ ಮುಗಿದಿದ್ದು, 50 ಸಾವಿರ ಕೋಟಿ ಕೊಡಲು ಹೋಗಿ ಜನರಿಗೆ 75 ಸಾವಿರ ಕೋಟಿ ಟೋಪಿ ಹಾಕುವ ಕೆಲಸವನ್ನು ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬೆಲೆ ಏರಿಕೆಯೇ ಈ ಸರಕಾರ 6ನೇ ಗ್ಯಾರಂಟಿ. ವಿದ್ಯುತ್ ದರ ಏರಿಕೆ, ಟೊಮೆಟೊ ಸಮೇತ ಎಲ್ಲ ತರಕಾರಿ ಬೆಲೆ ಏರಿಕೆ, ನಂದಿನಿ ಹಾಲು, ಮೊಸರು, ಮಜ್ಜಿಗೆ ಬೆಲೆ ಏರಿಕೆ, ಹೊಟೆಲ್ ಗಳಲ್ಲಿ ತಿಂಡಿಗಳ ಬೆಲೆ ಏರಿಕೆ, ಬಜೆಟ್ ನಲ್ಲಿ ಅಬಕಾರಿ ತೆರಿಗೆ ಹೆಚ್ಚಳ, ಮೋಟಾರು ವೆಹಿಕಲ್ ತೆರಿಗೆ ಹೆಚ್ಚಳ, ಸ್ಟ್ಯಾಂಪ್ ಡ್ನೂಟಿ ಹೆಚ್ಚಳ ಮೂಲಕ ಬರುವಂತ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗಲಿದೆ. ರಾಜ್ಯ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ದುನಿಯಾ ದುಬಾರಿಯಾಗಿದ್ದು ಜನತೆ ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.