ಬೆಂಗಳೂರು, ಅ 1(DaijiworldNews/AK): ಬುಧವಾರ ನಿಗದಿಯಾಗಿರುವ ಕಾಂಗ್ರೆಸ್ ಹೈಕಮಾಂಡ್ ಮಹತ್ವದ ಸಭೆಯಲ್ಲಿ ಪಾಲ್ಗೊಳ್ಳಲು ಪಕ್ಷದ ಹಿರಿಯ ನಾಯಕರು ಹಾಗೂ ಸಚಿವರು ಇಂದು ದೆಹಲಿಗೆ ತೆರಳಲಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಆಪ್ತ ಸಚಿವರು ಬುಧವಾರ ಬೆಳಿಗ್ಗೆ ತೆರಳಲಿದ್ದಾರೆ.
ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ಇದೇ ಮೊಟ್ಟ ಮೊದಲ ಬಾರಿಗೆ ಹೈಕಮಾಂಡ್ ದೆಹಲಿಯಲ್ಲಿ ರಾಜ್ಯದ ಹಿರಿಯ ನಾಯಕರು, ಸಚಿವರು ಹಾಗೂ ಸಂಸದರ ಸಭೆ ನಡೆಸುತ್ತಿದೆ. ಸಭೆಯಲ್ಲಿ ಪ್ರಮುಖವಾಗಿ ಲೋಕಸಭಾ ಚುನಾವಣೆಗೆ ತಯಾರಿ ಜತೆಗೆ ಎರಡೂವರೆ ತಿಂಗಳ ಅವಧಿಯಲ್ಲಿ ಸಚಿವರು ತಮ್ಮ ತಮ್ಮ ಇಲಾಖೆಗಳಲ್ಲಿ ಮಾಡಿರುವ ಅಭಿವೃದ್ಧಿ ಪ್ರಗತಿ ಕಾರ್ಯಗಳ ಅವಲೋಕನ ನಡೆಸಲಿದೆ.
ಅಲ್ಲದೇ ಸರ್ಕಾರದ 5 ಗ್ಯಾರಂಟಿಗಳ ಅನುಷ್ಠಾನದ ಸಾಧಕ ಬಾಧಕಗಳು, ಜನರ ಸ್ಪಂದನೆ ಯಾವ ರೀತಿ ಇದೆ. ಎರಡೂವರೆ ತಿಂಗಳಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳು ಜತೆಗೆ ಸರ್ಕಾರ ಹಾಗೂ ಸಚಿವರ ಮಟ್ಟದಲ್ಲಿ ಸೃಷ್ಟಿಯಾದ ವಿವಾದಗಳು, ವರ್ಗಾವಣೆ ದಂಧೆ ಆರೋಪಗಳ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆಗಳಿವೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಂ.ಸಿ.ವೇಣುಗೋಪಾಲ್, ರಣದೀಪ್ಸಿಂಗ್ ಸುರ್ಜೇವಾಲ ಅವರ ಸಮ್ಮುಖದಲ್ಲಿ ಸಭೆ ನಡೆಯಲಿದೆ. ಬಹುತೇಕ ಸಚಿವರು ರಿಪೋರ್ಟ್ಕಾರ್ಡ್ ಸಲ್ಲಿಸಲು ಈಗಾಗಲೇ ವರದಿ ಸಿದ್ಧಪಡಿಸಿಕೊಂಡಿದ್ದಾರೆ. ಈ ಮಧ್ಯೆ ಕೆಲವು ಸಚಿವರು ಪ್ರತ್ಯೇಕವಾಗಿ ಹೈಕಮಾಂಡ್ ಭೇಟಿ ಮಾಡುವ ಸಾಧ್ಯತೆ ಇದೆ.
ಹೈಕಮಾಂಡ್ ಭೇಟಿ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ತಮ್ಮನ್ನು ಕಾರ್ಯಾಧ್ಯಕ್ಷ ಸ್ಥಾನದಿಂದ ಬಿಡುಗಡೆಗೊಳಿಸಿ ಮತ್ತೂಬ್ಬರಿಗೆ ಅವಕಾಶ ಕಲ್ಪಿಸುವಂತೆ ಕೋರುವ ಸಾಧ್ಯತೆಗಳಿವೆ.
ಈ ಭೇಟಿ ವೇಳೆ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಿವಿಧ ನಿಗಮ, ಮಂಡಳಿಗಳ ನೇಮಕದ ಬಗ್ಗೆಯೂ ಚರ್ಚೆ ಆಗಲಿದೆ ಎಂದು ತಿಳಿದುಬಂದಿದೆ. ನೇಮಕಾತಿ ಮಾಡಬಹುದಾದ ನಿಗಮ-ಮಂಡಳಿಗಳ ಪಟ್ಟಿಯಲ್ಲಿ ಅರ್ಧದಷ್ಟು ಶಾಸಕರಿಗೆ ಉಳಿದ ಅರ್ಧದಷ್ಟು ಕಾರ್ಯಕರ್ತರಿಗೆ ಎಂಬುದು ಹೈಕಮಾಂಡ್ ಲೆಕ್ಕಾಚಾರವಾಗಿದೆ. ಈ ಬಗ್ಗೆ ಅಂತಿಮ ನಿರ್ಣಯ ಹೈಕಮಾಂಡ್ ಜೊತೆಗಿನ ಸಭೆ ಬಳಿಕ ತಿಳಿಯಲಿದೆ.