ದೆಹಲಿ, ಜು 31 (DaijiworldNews/SM): ಹರ್ಯಾಣದ ಮೇವಾತ್ ಪ್ರದೇಶದಲ್ಲಿ ಸೋಮವಾರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಕಲ್ಲು ತೂರಾಟ ಮತ್ತು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
ವರದಿಗಳ ಪ್ರಕಾರ, ನುಹ್ ಜಿಲ್ಲೆಯ ನಂದ್ ಗ್ರಾಮದ ಬಳಿ ಹಿಂದೂ ಸಂಘಟನೆಯ ಕಾರ್ಯಕರ್ತರು ನಡೆಸುತ್ತಿದ್ದ ರ್ಯಾಲಿಯ ಮೇಲೆ ಜನರ ಗುಂಪೊಂದು ಕಲ್ಲು ತೂರಾಟ ಮಾಡಿದೆ. ಗೋರಕ್ಷಕ ಮತ್ತು ಭಿವಾನಿ ಸಾವಿನ ಪ್ರಕರಣದ ಆರೋಪಿ ಮೋನು ಮಾನೇಸರ್ ಮೇವಾತ್ಗೆ ಭೇಟಿ ನೀಡಿದ್ದರು ಎಂಬ ವರದಿಗಳ ಮೇಲೆ ಹಿಂಸಾಚಾರ ಭುಗಿಲೆದ್ದಿದೆ.
ಈ ವರ್ಷದ ಫೆಬ್ರವರಿಯಲ್ಲಿ ನಾಸಿರ್ ಮತ್ತು ಜುನೈದ್ ಸಾವಿನ ಪ್ರಕರಣದಲ್ಲಿ ದಾಖಲಾಗಿರುವ ಎಫ್ಐಆರ್ನಲ್ಲಿ ಮೋನು ಮಾನೇಸರ್ ಹೆಸರನ್ನು ಉಲ್ಲೇಖಿಸಲಾಗಿದೆ. ಹರ್ಯಾಣದ ಭಿವಾನಿ ಜಿಲ್ಲೆಯ ಬೊಲೆರೊದಲ್ಲಿ ನಾಸಿರ್ ಮತ್ತು ಜುನೈದ್ ದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಜರಂಗದಳದ ಸದಸ್ಯರು ಮಾಡುವ ಶೋಭಾ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮೋನು ಮಾನೇಸರ್ ಜನರಿಗೆ ಮನವಿ ಮಾಡಿದ್ದರು. ಆದರೆ, ಈ ಬಗ್ಗೆ ಆ ಪ್ರದೇಶದ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಅವರ ಭೇಟಿ ವಿರೋಧಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸೋಮವಾರ, ಯಾತ್ರೆಯನ್ನು ಆರಂಭಗೊಂಡಾಗ ಘರ್ಷಣೆಯುಂಟಾಗಿದ್ದು, ಕಲ್ಲು ತೂರಾಟದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.