ಬೆಂಗಳೂರು, ಜು 31 (DaijiworldNews/AK): ಈ ಬಾರಿಯ ಮೈಸೂರು ದಸರಾ ಮಹೋತ್ಸವದ ಮೆರವಣಿಗೆಯಲ್ಲಿ ಕಾಂಗ್ರೆಸ್ ಸರ್ಕಾರದ 5 ಉಚಿತ ಗ್ಯಾರಂಟಿಗಳ ಬಗ್ಗೆ ತಿಳಿಸುವ ಸ್ತಬ್ಧಚಿತ್ರ ಇರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮೈಸೂರು ದಸರಾ ಮಹೋತ್ಸವ ಉನ್ನತ ಮಟ್ಟದ ಸಮಿತಿ’ಯ ಸಭೆಯ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ವರ್ಷ 5 ಗ್ಯಾರಂಟಿಗಳ ಬಗ್ಗೆ ತಿಳಿಸುವ ಸ್ತಬ್ಧಚಿತ್ರ ಇರಲಿದೆ. ಅಲ್ಲದೇ ಈ ಬಾರಿ ದಸರಾ ಹಬ್ಬವನ್ನು ಅರ್ಥಪೂರ್ಣವಾಗಿ ಅದ್ಧೂರಿಯಾಗಿ ಮಾಡಬೇಕು ಎಂದು ಸಮಿತಿ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿಸಿದರು.
ಸ್ತಬ್ಧಚಿತ್ರಗಳ ಆಯ್ಕೆ ಮಾಡುವಾಗ ಐದು ಗ್ಯಾರಂಟಿಗಳನ್ನು ಪ್ರತಿಬಿಂಬಿಸುವ ಹಾಗೂ ಅವುಗಳ ಬಗ್ಗೆ ಜನರಿಗೆ ತಿಳಿಸುವಂಥದ್ದನ್ನು ಆಯ್ಕೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.ಅಕ್ಟೋಬರ್ 15ರಂದು ಬೆಳಗ್ಗೆ 10.15 ರಿಂದ 10.30 ರೊಳಗೆ ಶುಭ ಲಗ್ನದಲ್ಲಿ ದಸರಾ ಮಹೋತ್ಸವ ಉದ್ಘಾಟನೆಯಾಗಲಿದೆ. ಮೈಸೂರು ದಸರಾ ಉದ್ಘಾಟಕರ ಆಯ್ಕೆ ಬಗ್ಗೆ ನನಗೆ ಹೊಣೆ ನೀಡಿದ್ದಾರೆ. ದಸರಾ ಪೂರ್ವಭಾವಿ ಸಭೆಯಲ್ಲಿ ಒಬ್ಬರ ಹೆಸರಿನ ಬಗ್ಗೆ ಚರ್ಚೆ ಮಾಡಿದ್ದೇವೆ. ಕೆಆರ್ ಕ್ಷೇತ್ರದ ಶಾಸಕರು ಸುತ್ತೂರು ಶ್ರೀಗಳ ಹೆಸರು ಪ್ರಸ್ತಾಪ ಮಾಡಿದ್ದಾರೆ. ಆದರೆ, ಉದ್ಘಾಟಕರ ಹೆಸರು ಅಂತಿಮವಾಗಿಲ್ಲ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.
ಸಭೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್ಸಿ ಮಹದೇವಪ್ಪ, ಸಚಿವ ಶಿವರಾಜ್ ತಂಗಡಗಿ, ಕೆ ವೆಂಕಟೇಶ್, ಭೈರತಿ ಸುರೇಶ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಮೈಸೂರು ಜಿಲ್ಲೆಯ ಶಾಸಕರು ಹಾಗೂ ಜಿಲ್ಲಾಧಿಕಾರಿ ಭಾಗವಹಿಸಿದ್ದರು.