ನವದೆಹಲಿ, ಜು 30 (DaijiworldNews/AK): ದೇಶಕ್ಕಾಗಿ ಮಡಿದ ವೀರಯೋಧರನ್ನು ಗೌರವಿಸುವ ನಿಟ್ಟಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪೂರ್ವದಲ್ಲಿ 'ಮೇರಿ ಮತಿ ಮೇರಾ ದೇಶ್' ಅಭಿಯಾನವನ್ನು ಪ್ರಾರಂಭಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಅವರು ಮನ್ ಕಿ ಬಾತ್ ರೇಡಿಯೋ ಪ್ರಸಾರ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲೆಡೆ 'ಅಮೃತ್ ಮಹೋತ್ಸವ' ಪ್ರತಿಧ್ವನಿಸುತ್ತಿದೆ.ಇದೀಗ ಆಗಸ್ಟ್ 15 ಸಮೀಪದಲ್ಲಿದ್ದು, ದೇಶದಲ್ಲಿ 'ಮೇರಿ ಮತಿ ಮೇರಾ ದೇಶ್' ಎಂಬ ದೊಡ್ಡ ಅಭಿಯಾನ ಆರಂಭವಾಗಲಿದೆ. ಧೈರ್ಯಶಾಲಿಗಳನ್ನು ಗೌರವಿಸಲು ಅಭಿಯಾನವನ್ನು ಪ್ರಾರಂಭಿಸಲಾಗುವುದು ಮತ್ತು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರ ಸ್ಮರಣಾರ್ಥ ಭಾರತದಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು' ಎಂದು ಹೇಳಿದರು.
ಹುತಾತ್ಮ ಯೋಧರ ಸ್ಮರಣಾರ್ಥ ದೇಶದ ಲಕ್ಷಗಟ್ಟಲೆ ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಶಾಸನಗಳನ್ನು ಸ್ಥಾಪಿಸಲಾಗುವುದು. ಈ ಅಭಿಯಾನದ ವೇಳೆ ‘ಅಮೃತ ಕಲಶ ಯಾತ್ರೆ’ಯನ್ನೂ ಕೈಗೊಳ್ಳಲಾಗುವುದು. 'ಹಳ್ಳಿಗಳು ಮತ್ತು ದೇಶದ ನಾನಾ ಮೂಲೆಗಳಿಂದ 7,500 ಕಲಶ'ಗಳಲ್ಲಿ ಮಣ್ಣನ್ನು ಹೊತ್ತ ಈ 'ಅಮೃತ ಕಲಶ ಯಾತ್ರೆ' ದೆಹಲಿ ತಲುಪಲಿದೆ. ಈ ಯಾತ್ರೆಯು ದೇಶದ ನಾನಾ ಭಾಗಗಳಿಂದ ಗಿಡಗಳನ್ನು ಹೊತ್ತೊಯ್ಯಲಿದೆ. 7,500 ಕಲಶದಿಂದ ಮಣ್ಣು, ಗಿಡಗಳು ದೆಹಲಿಗೆ ಬರಲಿದೆ. ರಾಷ್ಟ್ರೀಯ ಯುದ್ಧ ಸ್ಮಾರಕದ ಸಮೀಪ ‘ಅಮೃತ ವಾಟಿಕಾ’ ನಿರ್ಮಿಸಲಾಗುವುದು' ಎಂದು ಹೇಳಿದರು.