ಬೆಂಗಳೂರು, ಜು 30 (DaijiworldNews/MS): ವಿಧಾನಸೌಧ ಆವರಣದಲ್ಲಿ ಅನುಮತಿ ಇಲ್ಲದೆ ಡ್ರೋನ್ ಕ್ಯಾಮೆರಾ ಹಾರಾಟ ನಡೆಸುತ್ತಿದ್ದ ಆರೋಪದಡಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ.
ಮ್ಯಾನೇಜ್ಮೆಂಟ್ ಕಂಪನಿ ಉದ್ಯೋಗಿಗಳಾದ ಅರುಣ್ ಮತ್ತು ವಿನೋದ್ ಬಾಬು ಅವರನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜು.28ರಂದು ಬೆಳಗ್ಗೆ ವಿಧಾನಸೌಧದ ಪೂರ್ವ ಪ್ರವೇಶದ್ವಾರದ ಬಳಿಯ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮೇಲೆ ಡ್ರೋನ್ ಕ್ಯಾಮೆರಾ ಹಾರಿಸುತ್ತಿದ್ದರು. ಇದನ್ನು ನೋಡಿದ್ದ ಗಸ್ತು ಪೊಲೀಸ್ ಸಿಬ್ಬಂದಿ ಇಬ್ಬರನ್ನೂ ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು. ಬಳಿಕ ಅತಿಕ್ರಮ ಪ್ರವೇಶ ಹಾಗೂ ನಿರ್ಲಕ್ಷ್ಯದ ಆರೋಪದಡಿ ಪ್ರಕರಣ ದಾಖಲಿಸಿದ್ದರು.
ತಮ್ಮ ಕಂಪನಿ ಸ್ಥಾಪಿಸಿ 15 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನೆನಪಿಗಾಗಿ ವಿಶೇಷ ವಿಡಿಯೊ ಸಿದ್ಧಪಡಿಸುವ ಬಂ,ದಿರುವುದಾಗಿ, ಹಾಗೂ ವಿಧಾನಸೌಧದ ಆವರಣ ‘ನೋ ಫ್ಲೈಯಿಂಗ್ ವಲಯ’ ಎಂಬ ತಿಳುವಳಿಕೆ ನಮಗಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ಎಚ್ಚರಿಕೆ ನೀಡದ ವಿಧಾನಸೌಧ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.