ಮೂಡಿಗೆರೆ, ಏ 04(MSP): ದೇಶದ ಚುನಾವಣಾ ವ್ಯವಸ್ಥೆಯಲ್ಲಿಯೇ ಒಂದು ಪಕ್ಷದ ಅಭ್ಯರ್ಥಿ ಇನ್ನೊಂದು ಚಿಹ್ನೆಯಲ್ಲಿ ಸ್ಪರ್ಧಿಸುವುದು ಇತಿಹಾಸ. ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ಮೈತ್ರಿ ಹಾಲು ಜೇನಿನ ಮಿಶ್ರಣವಿದ್ದಂತೆ. ನನ್ನ ಸಚಿವ ಸ್ಥಾನದ ಅವಧಿಯಲ್ಲಿ ಜನರಿಂದ ಬಂದ ಅಹವಾಲನ್ನು ನನಗೆ ನೀಡಿದ ಬ್ಯಾಗಿನ ಮೂಲಕ ಸರಕಾರಿ ಕಛೇರಿಗಳಿಗೆ ಅಲೆದು ಇಲಾಖಾವಾರು ಬೇಡಿಕೆಗಳ ಮನವಿಯೊಂದಿಗೆ ಕ್ಷೇತ್ರಕ್ಕೆ 2000 ಕೋಟಿ ಅನುದಾನವನ್ನು ತಂದು ಸಮಗ್ರ ಅಭಿವೃದ್ಧಿ ಪಡಿಸಿದ ಸಂತೃಪ್ತಿ ನನಗಿದೆ.
ನನ್ನ ಅಧಿಕಾರಾವಧಿಯ ಕೊನೆಯಲ್ಲಿ ರಾಜ್ಯದ ಹೆಸರಾಂತ ಮಾಧ್ಯಮಗಳು ಮಾಡಿದ ಅಭಿವೃದ್ಧಿ ಸಮೀಕ್ಷೆಯಲ್ಲಿ ರಾಜ್ಯದ 224ಶಾಸಕರ ಪೈಕಿ ನನ್ನ ಕ್ಷೇತ್ರಕ್ಕೆ ಪ್ರಥಮ ಪ್ರಶಸ್ತಿ ಲಭಿಸಿದೆ. ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಗಳಿಗೆ ಕಾರ್ಯಕರ್ತರಿಂದ ಗೋಬ್ಯಾಕ್ ಚಳುವಳಿ ಆಗಿದ್ದರೆ ಅದು ಶೋಭಾರವರಿಗೆ ಮಾತ್ರ. ಈ ಹಿನ್ನಲೆಯಲ್ಲಿ ಅವರು ಕ್ಷೇತ್ರಕ್ಕೆ ನೀಡಿದ ಕೊಡುಗೆ ಶೂನ್ಯ ಎಂಬುವುದು ಜಗಜ್ಜಾಹೀರಾಗಿದೆ. ಬಡವರಿಗೆ ನ್ಯಾಯ ಒದಗಿಸಲು, ಸಮಸ್ಯೆಗಳನ್ನು ಪರಿಹರಿಸಲು ನಾನು ಬದ್ಧನಿದ್ದೇನೆ ಎಂದು ಏ.4 ರ ಗುರುವಾರ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಳಸ ಬ್ಲಾಕ್ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ಕಾರ್ಯಕರ್ತರ ಸಭೆಯಲ್ಲಿ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜರು ಹೇಳಿದರು.
ಶೋಭಾರವರು ಟಿಕೇಟಿಗಾಗಿ ಯಡಿಯೂರಪ್ಪರವರ ಹೆಸರನ್ನು, ಮತಗಳಿಕೆಗಾಗಿ ಮೋದಿಯವರ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಶೋಭಾ ಕರಂದ್ಲಾಜೆಯವರು ಸಂಸತ್ ಸದಸ್ಯರಾಗಿ ಕ್ಷೇತ್ರಕ್ಕೆ ಏನೂ ಕೆಲಸ ಮಾಡದೆ, ಜನರ ಸಂಕಷ್ಟಕ್ಕೆ ಸ್ಪಂದಿಸದೆ ಈಗಾಗಲೇ ಜನರಿಂದ ದೂರ ಸರಿದಿದ್ದಾರೆ. ಆದ್ದರಿಂದ ನಿಮಗೆ ಕೆಲಸ ಮಾಡುವ ಅಭ್ಯರ್ಥಿ ಬೇಕೆ? ಅಥವಾ ಕೆಲಸ ಮಾಡದೇ ಅಪರೂಪಕ್ಕೆ ಕ್ಷೇತ್ರವನ್ನು ಸಂದರ್ಶಿಸುವ ಅಭ್ಯರ್ಥಿ ಬೇಕೆ? ಎಂದು ನೀವೆ ನಿರ್ಧರಿಸಿ ಎಂದು ಪ್ರಮೋದ್ ಮಧ್ವರಾಜ್ರವರು ಹೇಳಿದರು. ಸಭೆಯಲ್ಲಿ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್.ನ ಮುಖಂಡರು ಉಪಸ್ಥಿತರಿದ್ದರು.