ಬೆಂಗಳೂರು, ಜು 29 (DaijiworldNews/AK):ಪ್ರತಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಗಿಡ, ಮರಗಳನ್ನ ಬೆಳೆಸಿ ನಿರ್ವಹಣೆ ಮಾಡುವುದನ್ನ ಕಡ್ಡಾಯಗೊಳಿಸುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಆರೋಗ್ಯ ಸಂಸ್ಥೆಗಳ ಆವರಣದಲ್ಲಿ ಉತ್ತಮ ಗಾಳಿ ನೀಡುವಂತಹ ಹಾಗೂ ಔಷಧೀಯ ಗಿಡ-ಮರಗಳನ್ನ ಬೆಳೆಸಿ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವಂತೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.
ʻಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯʼ ಎಂಬ ರಾಷ್ಟ್ರೀಯ ಕಾರ್ಯಕ್ರಮದ ಅಡಿಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಗಿಡ-ಮರಗಳನ್ನ ಕಡ್ಡಾಯವಾಗಿ ಬೆಳೆಸುವಂತೆ ಆರೋಗ್ಯ ಇಲಾಖೆ ಹೊಸ ಕ್ರಮ ಕೈಗೊಂಡಿದೆ.
ಗಿಡಗಳನ್ನ ನೆಡುವುದರಿಂದ ಆರೋಗ್ಯ ಕೇಂದ್ರಗಳಲ್ಲಿ ಹಸಿರು ವಾತಾವರಣ ನಿರ್ಮಾಣ ಆಗುತ್ತದೆ. ಜೊತೆಗೆ ಮಳೆಯ ನೀರನ್ನು ಭೂಮಿ ಹೀರಿಕೊಳ್ಳುವುದರಿಂದ ಅಂತರ್ಜಲ ಮಟ್ಟವೂ ಹೆಚ್ಚಾಗುತ್ತದೆ. ಹೀಗಾಗಿ ನೆಟ್ಟ ಗಿಡಗಳನ್ನ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವಂತೆಯೂ ಎಚ್ಚರಿಸಿದೆ. ಜುಲೈ ತಿಂಗಳ ಒಳಗಡೆ ಕಡ್ಡಾಯವಾಗಿ ಆಸ್ಫತ್ರೆ ಆವರಣದಲ್ಲಿ ಗಿಡ ನೆಡುವ ಚಟುವಟಿಕೆ ಮುಗಿಸುವಂತೆ ಸೂಚಿಸಿದೆ.