ಬೆಂಗಳೂರು,ಜು 29 (DaijiworldNews/AK):ಐವರು ಶಂಕಿತ ಭಯೋತ್ಪಾದಕರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತರ ಮನೆಯಲ್ಲಿ ಸಿಕ್ಕ ಗ್ರೆನೇಡ್ ವಿದೇಶದಿಂದ ಆಮದಾಗಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಬಂಧಿತ ಐವರು ಶಂಕಿತರು ಕೇವಲ ಕೊರಿಯರ್ ಮೂಲಕ ಗ್ರೆನೇಡ್, ಪಿಸ್ತೂಲ್ ಇದ್ದ ಪಾರ್ಸೆಲ್ಗಳನ್ನು ತೆಗೆದುಕೊಂಡು ಸಂಗ್ರಹಿಸಿ ಇಡುತ್ತಿದ್ದರು. ಆದರೆ ಕೃತ್ಯದ ಯೋಜನೆ, ಸಂಚನ್ನು ಬೇರೆ ತಂಡ ರೂಪಿಸುತ್ತಿತ್ತು ಎಂಬ ಅಂಶ ತನಿಖೆ ವೇಳೆ ತಿಳಿದುಬಂದಿದೆ.
ಈ ಗ್ರೆನೇಡ್, ಪಿಸ್ತೂಲ್ ಬಗ್ಗೆ,ಏನೇ ಕೆಲಸ ಮಾಡಿದರೂ ಯಾರಿಗೂ ಹೇಳದಂತೆ ಶಂಕಿತರ ಬಳಿ ಆರೋಪಿಗಳಾದ ನಜೀರ್, ಜುನೈದ್ ಪ್ರಮಾಣ ಮಾಡಿಸಿಕೊಂಡಿದ್ದರು.. ಡೆಲಿವರಿ ಬಾಯ್ ನೀಡುವ ಪಾರ್ಸೆಲ್ ಓಪನ್ ಮಾಡಬಾರದು. ಹೀಗಾಗಿ ಶಂಕಿತ ಉಗ್ರರು ಪಾರ್ಸೆಲ್ ತೆರೆಯದೆ ಸೇಫಾಗಿಟ್ಟಿದ್ದರು ಎನ್ನಲಾಗಿದೆ.
ಶಂಕಿತ ಉಗ್ರರು ನಗರದಲ್ಲಿ ಸ್ಪೋಟ ನಡೆಸಲು ಸಂಚು ರೂಪಿಸಿದ್ದಲ್ಲದೆ, ಡ್ರಗ್ಸ್ ಕೂಡ ಸಪ್ಲೈ ಮಾಡುತ್ತಿದ್ದರು ಎಂಬ ಅಂಶ ಸಿಸಿಬಿ ತನಿಖೆ ವೇಳೆ ಬಯಲಾಗಿತ್ತು. ಬಂಧಿತರ ಐವರು ಶಂಕಿತ ಉಗ್ರರ ಪೈಕಿ ಮುದಾಸಿರ್ ಹಾಗೂ ಉಮರ್ ಇಬ್ಬರು ಶಂಕಿತ ಉಗ್ರರರು ಡ್ರಗ್ಸ್ ಸಪ್ಲೈ ಮಾಡುತ್ತಿದ್ದರು.ಇದೇ ವೇಳೆ ಸಿಸಿಬಿ ಪೊಲೀಸರು ಶಂಕಿತ ಉಗ್ರ ಮುದಾಸಿರ್ ಪ್ರಿಯತಮೆಯನ್ನು ವಿಚಾರಣೆಗೆ ಒಳಪಡಿಸಿದಾಗ ಈ ಅಂಶ ಬಯಲಾಗಿದೆ. ಮುದಾಸಿರ್ ಪ್ರಿಯತಮೆ ಕೈಯಲ್ಲಿ ಡ್ರಗ್ಸ್ ಇಟ್ಟು ನಾನು ಹೇಳಿದವರಿಗೆ ಇದನ್ನು ಕೊಡು ಎಂದು ಹೇಳಿ ಹೋಗುತ್ತಿದ್ದನಂತೆ. ಇದರಂತೆ ಪ್ರಿಯತಮ ಮುದಾಸಿರ್ ಹೇಳಿದವರಿಗೆ ಗೆಳತಿ ಡ್ರಗ್ಸ್ ಕೊಡುತ್ತಿದ್ದಳು ಎಂಬ ಮಾಹಿತಿ ಹೊರ ಬಿದ್ದಿದೆ. ಇದೀಗ ಸಿಸಿಬಿ ಅಧಿಕಾರಿಗಳು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.