ಬೆಂಗಳೂರು, ಜು 28 (DaijiworldNews/AK: ಚುನಾವಣೆಯ ಸಂದರ್ಭದಲ್ಲಿ ಕೊಟ್ಟ5 ಗ್ಯಾರಂಟಿಗಳ ಜಾರಿಗೆ ಮೊದಲ ಆದ್ಯತೆಯನ್ನು ಸರ್ಕಾರ ನೀಡಲಿದೆ. ಈ ನಿಟ್ಟಿನಲ್ಲಿ ಈ ವರ್ಷ ಶಾಸಕರು ಕ್ಷೇತ್ರವಾರು ಅನುದಾನದ ಬಗ್ಗೆ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಳ್ಳಬೇಡಿ ಎಂದು ಸಿಎಂ ಸಿದ್ದರಾಮಯ್ಯ ಅವರು ಶಾಸಕರಿಗೆ ಮನವಿ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ನಗರದ ಖಾಸಗಿ ಹೋಟೆಲ್ನಲ್ಲಿ ಗುರುವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕರ ಸಮಸ್ಯೆಗಳನ್ನು ಆಲಿಸಿ ಅನುದಾನ ವಿಚಾರವಾಗಿ ಶಾಸಕರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಗ್ಯಾರಂಟಿ ಯೋಜನೆಗಳ ಜಾರಿಗೆ ಸುಮಾರು 54,000 ಕೋಟಿ ಹಣ ಬೇಕಾಗಿದೆ. ಹೀಗಾಗಿ ಈ ವರ್ಷ ಅನುದಾನದ ಕುರಿತು ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಳ್ಳಬೇಡಿ ಎಂದಿದ್ದಾರೆ ಎನ್ನಲಾಗುತ್ತಿದೆ.
ಶಾಸಕರು ಅನುದಾನ ವಿಚಾರವಾಗಿ ಬರೆದ ಪತ್ರದ ಹಿನ್ನೆಲೆಯಲ್ಲಿ ಅವರನ್ನು ಸಮಾಧಾನ ಮಾಡಿರುವ ಸಿದ್ದರಾಮಯ್ಯ, ಜಿಲ್ಲಾವಾರು ಸಭೆ ನಡೆಸಿ ಶಾಸಕರ ಸಮಸ್ಯೆಗಳನ್ನು ಆಲಿಸುವ ಭರವಸೆ ನೀಡಿದ್ದಾರೆ. ಹೀಗಾಗಿ ಸಿಎಲ್ಪಿ ಸಭೆಯಲ್ಲಿ ಶಾಸಕರು ಕೂಡಾ ಕೊಂಚ ಸಮಾಧಾನಗೊಂಡಿದ್ದಾರೆ. ಅಲ್ಲದೆ ಪತ್ರದ ಬಗ್ಗೆ ಬಿಆರ್ ಪಾಟೀಲ್ ಹಾಗೂ ಬಸವರಾಜ ರಾಯರೆಡ್ಡಿ ಸಮರ್ಥನೆಯನ್ನು ನೀಡಿದ್ದಾರೆ ಎನ್ನಲಾಗುತ್ತಿದೆ.
ಕೆಲವು ಸಚಿವರ ನಡೆಯ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದು, ಸರಿಯಾದ ರೀತಿಯಲ್ಲಿ ಶಾಸಕರಿಗೆ ಸ್ಪಂದನೆ ನೀಡಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ಶಾಸಕರನ್ನು ಸಮಾಧಾನ ಮಾಡಿದ್ದಾರೆ. ಈ ಹಿನ್ನಲೆ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀವ್ರ ಮಟ್ಟದ ಚರ್ಚೆ ನಡೆದಿಲ್ಲ ಎಂದು ತಿಳಿದು ಬಂದಿದೆ.
ಆಡಳಿತಾತ್ಮಕ ಒತ್ತಡಗಳ ನಡುವೆಯೂ ನಾನು ತಿಂಗಳಿಗೊಮ್ಮೆ ಜಿಲ್ಲಾವಾರು ಶಾಸಕರ ಸಭೆ ಕರೆಯುತ್ತೇನೆ. ಕ್ಷೇತ್ರದ ಕುಂದು ಕೊರತೆಗಳ ಬಗ್ಗೆ ಚರ್ಚಿಸುತ್ತೇನೆ. ಸರ್ಕಾರದಿಂದ ತುರ್ತಾಗಿ ಆಗಬೇಕಿರುವ ಕೆಲಸಗಳು ಸಮರ್ಪಕವಾಗಿ ಆಗುವಂತೆ ನೋಡಿಕೊಳ್ಳುತ್ತೇನೆ. ಏನೇ ಅಸಮಾಧಾನಗಳಿದ್ದರೂ ನೇರವಾಗಿ ನನಗೆ ಹೇಳಿ, ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಎಂದು ಸಿಎಂ ಶಾಸಕರಿಗೆ ಕಿವಿ ಮಾತು ಹೇಳಿದ್ದಾರೆ