ಚೆನ್ನೈ, ಏ 04(MSP): ದೇಶದ ಯುವ ಜನರನ್ನು ಅತಿಯಾಗಿ ಸೆಳೆಯುತ್ತಿರುವ ಚೀನಾ ಮೂಲದ ಖ್ಯಾತ ಡಬ್ ಸ್ಮಾಶ್ ಆ್ಯಪ್ ಟಿಕ್ ಟಾಕ್ ಆ್ಯಪ್ ನ್ನು ಬ್ಯಾನ್ ಮಾಡಲು ಮದ್ರಾಸ್ ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ.
ಟಿಕ್ಟಾಕ್ ಆ್ಯಪ್ ಬಳಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಚೀನಾದ ಈ ಆ್ಯಪ್ ಅಶ್ಲೀಲತೆಯನ್ನು ಪ್ರಚೋದಿಸುವುದರಿಂದ ಟಿಕ್ಟಾಕ್ ಆ್ಯಪ್ ಅನ್ನು ಬ್ಯಾನ್ ಮಾಡುವುದು ಸೂಕ್ತ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಪ್ರಸಿದ್ಧಿ ಪಡೆಯುವ ಟಿಕ್ಟಾಕ್ ಆ್ಯಪ್ ಅನ್ನು ಟೈಂಪಾಸ್ಗೆ ಬಳಸುವವರ ಸಂಖ್ಯೆ ಹೆಚ್ಚಿದೆ. ಈ ಆ್ಯಪ್ ನ್ನು ಭಾರತದ 130 ಕೋಟಿ ಜನರು ಬಳಸುತ್ತಿದ್ದಾರೆ. ಟಿಕ್ಟಾಕ್ ಆ್ಯಪ್ನಲ್ಲಿ ವಿಭಿನ್ನ ಎಫೆಕ್ಟ್ಗಳೊಂದಿಗೆ ವಿಡಿಯೋ ಚಿತ್ರೀಕರಿಸಬಹುದಾಗಿದೆ. ಮಾತ್ರವಲ್ಲದೆ ಶಾರ್ಟ್ ವಿಡಿಯೋಗಳನ್ನು ಶೇರ್ ಮಾಡಬಹುದಾಗಿದೆ.
ಅಶ್ಲೀಲ, ಸ್ಥಳೀಯ ಸಂಸ್ಕೃತಿಗೆ ಧಕ್ಕೆಯಾಗುವ , ಮಕ್ಕಳಲ್ಲಿ ಆತ್ಮಹತ್ಯೆ ಭಾವನೆ ಬೆಳೆಸುವ, ಮಕ್ಕಳ ಮೇಲಿನ ದೌರ್ಜನ್ಯದಂಥ ಸಂಗತಿಗಳು, ಈ ಆ್ಯಪ್ ನಲ್ಲಿ ಇರುವುದರಿಂದ ಇದಕ್ಕೆ ನಿಷೇಧ ಹೇರಬೇಕು ಎಂದು ಮಧುರೈ ಮೂಲದ ಹಿರಿಯ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಮುತ್ತು ಕುಮಾರ್ ಎಂಬುವವರು ಟಿಕ್ ಟಾಕ್ ಆ್ಯಪ್ ವಿರುದ್ಧ ದೂರು ಸಲ್ಲಿಸಿದ್ದರು.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿರುವ ಮದ್ರಾಸ್ ಹೈಕೋರ್ಟ್, ಟಿಕ್ಟಾಕ್ ವಿಡಿಯೋ ಆ್ಯಪ್ ಬಳಸುವ ಮಕ್ಕಳಲ್ಲಿ ಪೋರ್ನೊಗ್ರಫಿಗೆ ಉತ್ತೇಜಿಸಲಾಗುತ್ತಿದೆ. ಅಪರಿಚಿತರ ಜೊತೆಗೆ ಮಕ್ಕಳು ಬಹುಬೇಗ ಪರಿಚಯ ಮಾಡಿಕೊಳ್ಳಲು ಈ ಆ್ಯಪ್ನಲ್ಲಿ ಅವಕಾಶವಿದೆ. ಇದರಿಂದ ಮುಂದೆ ಮಕ್ಕಳಿಗೆ ತೊಂದರೆಗೆ ಸಿಲುಕಿ ಅವರ ಮೇಲೆ ಅಪರಿಚಿತರು ದೌರ್ಜನ್ಯ ನಡೆಸಬಹುದು ಎಂದು ಹೇಳಿದೆ.
ಈ ದೂರಿನ ಅರ್ಜಿ ವಿಚಾರಣೆ ನಡೆಸಿದ ಜಸ್ಟಿಸ್ ಎನ್ ಕಿರುಬಕಾರನ್ ಮತ್ತು ಎಸ್ ಎಸ್ ಸುಂದರ್ ಅವರು ಈ ಸಂಬಂಧ ಕೇಂದ್ರ ಸರ್ಕಾರದ ಸ್ಪಷ್ಟನೆ ಕೇಳಿದ್ದು, ಏಪ್ರಿಲ್ 16ರೊಳಗೆ ಆ್ಯಪ್ ನ ನಿಷೇಧ ಕುರಿತು ಉತ್ತರ ನೀಡುವಂತೆ ಸೂಚನೆ ನೀಡಿದೆ.