ಹಾಸನ, ಎ04(SS): ಮೋದಿಯವರು ದೇಶವನ್ನು ಕಾಂಗ್ರೆಸ್ ಮುಕ್ತ ದೇಶ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ, ಅದು ಅವರಿಂದ ಸಾಧ್ಯವಿಲ್ಲ ಎಂದು ಮಾಜಿ ಪ್ರದಾನಿ ದೇವೇಗೌಡರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿಯವರು ದೇಶವನ್ನು ಕಾಂಗ್ರೆಸ್ ಮುಕ್ತ ದೇಶ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಆ ಮಾತನ್ನು ನಾನು ಕೇಳಿಸಿಕೊಂಡಿದ್ದೇನೆ. ಅದು ಸಾಧ್ಯವಿಲ್ಲ. ನಾನೂ ಕೂಡ ಹಳೆಯ ಕಾಂಗ್ರೆಸ್ ಕಾರ್ಯಕರ್ತ ಎಂದು ತಿಳಿಸಿದರು.
ಯಾರು ಮೋದಿಯವರನ್ನು ಟೀಕಿಸುತ್ತಾರೆ ಅವರ ಮೇಲೆ ಕಣ್ಣಿಡಲಾಗುತ್ತಿದೆ. ಕಳೆದ ಐದು ವರ್ಷಗಳಿಂದ ಐಟಿ ದುರ್ಬಳಕೆ ಹೆಚ್ಚಾಗಿದೆ. ಇದೇ ರೀತಿ ದೇಶದ ಹಲವು ಸಂಸ್ಥೆಗಳನ್ನು ಮೋದಿಯವರು ಬಳಸಿಕೊಂಡಿದ್ದಾರೆ. ಅವರನ್ನು ಟೀಕಿಸುವರನ್ನು ಈ ದೇಶದ ಹಣ ಲೂಟಿಮಾಡಿದ್ದಾರೆ ಎನ್ನುವ ಉತ್ಪ್ರೇಕ್ಷೆಯ ಮಾತನ್ನಾಡುತ್ತಾರೆ ಎಂದು ಆರೋಪಿಸಿದರು.
ಜೆ.ಹೆಚ್ ಪಟೇಲರು ನಮ್ಮ ಪಕ್ಷದಲ್ಲಿ ಹಿರಿಯ ವ್ಯಕ್ತಿ ಆಗಿದ್ದರಿಂದ ಅಂದು ಅವರನ್ನು ಮುಖ್ಯಮಂತ್ರಿ ಮಾಡಲಾಗಿತ್ತು. ನಂತರ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಆಗಿ ಐದು ವರ್ಷ ಅಧಿಕಾರ ನಡೆಸಿದ್ದಾರೆ. ನಮ್ಮ ಜೆಡಿಎಸ್ ಪಕ್ಷದಿಂದ ಅಂದು ಯಾಕೆ ಮುಖ್ಯಮಂತ್ರಿ ಮಾಡಿಲ್ಲ ಎನ್ನುವ ನೋವು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರನ್ನು ಮೈಸೂರಿನಲ್ಲಿ ಸೋಲಿಸಿದ್ದು ಜಿಟಿ ದೇವೇಗೌಡ ಅಲ್ಲ, ಅದು ಜನರ ತೀರ್ಪಾಗಿತ್ತು. ಈಗ ನನ್ನ ಜೀವನದಲ್ಲಿ ಅಗ್ನಿ ಪರೀಕ್ಷೆ ಎದುರಾಗಿದೆ ಎಂದು ಹೇಳಿದರು.
ದೇಶದಲ್ಲಿ ಆಗುತ್ತಿರುವ ಕೆಲ ಘಟನೆಗಳು ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ಹೀಗಾಗಿ ನಾವು ಕಾಂಗ್ರೆಸ್ ಜೊತೆ ಕೈಜೋಡಿಸಿದ್ದು ಎಂದು ಹೇಳಿದರು.