ಹೈದರಾಬಾದ್, ಜು 27 (DaijiworldNews/HR): ಹೈದರಾಬಾದ್ ಮೂಲದ ಯುವತಿಯೊಬ್ಬಳು ಸ್ನಾತಕೋತ್ತರ ಪದವಿ ಪಡೆಯಲು ಅಮೇರಿಕಾಕ್ಕೆ ತೆರಳಿದ್ದು, ಇದೀಗ ಚಿಕಾಗೋದ ಬೀದಿಯಲ್ಲಿ ಹಸಿವಿನಿಂದ ಬಳಲುತ್ತಿರುವ ದೃಶ್ಯ ಕಂಡು ಬಂದಿದ್ದು ಆಕೆಯನ್ನು ಭಾರತಕ್ಕೆ ಕರೆತರುವಂತೆ ಯುವತಿಯ ತಾಯಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಯುವತಿಯ ತಾಯಿ ಈ ಕುರಿತು ಪತ್ರ ಬರೆದಿದ್ದು, ನನ್ನ ಮಗಳು ಸೈಯದಾ ಲುಲು ಮಿನ್ಹಾಜ್ ಜೈದಿ ಚಿಕಾಗೋದ ಡೆಟ್ರಾಯಿಟ್ನಲ್ಲಿರುವ ಡೆಟ್ರಾಯಿಟ್ನ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮಾಡಲು 2021ರ ಆಗಸ್ಟ್ ತಿಂಗಳಲ್ಲಿ ಅಮೇರಿಕಾಕ್ಕೆ ತೆರಳಿದ್ದಾಳೆ. ಈಗ ಕಳೆದ 2 ತಿಂಗಳಿಂದ ನಾವು ಅವಳನ್ನು ಸಂಪರ್ಕ ಹೊಂದಲು ಸಾಧ್ಯವಾಗಲಿಲ್ಲ ಆ ಬಳಿಕ ಆಕೆಯ ಸ್ಥಿತಿಯನ್ನು ತೆಲಂಗಾಣ ಮೂಲದ ಮಜ್ಲಿಸ್ ಬಚಾವೋ ತೆಹ್ರೀಕ್ ವಕ್ತಾರ ಅಮ್ಜೆದ್ ಉಲ್ಲಾ ಖಾನ್ ಅವರು ಬೆಳಕಿಗೆ ತಂದ ಮೇಲೆ ಆಕೆಯ ಸ್ಥಿತಿ ಹೇಗಿದೆ ಎಂಬುದು ಗೊತ್ತಾಯಿತು, ನನ್ನ ಮಗಳ ಬಳಿಯಿದ್ದ ಬ್ಯಾಗ್, ಪ್ರಮುಖ ದಾಖಲೆ ಹಣ ಸೇರಿ ಎಲ್ಲವನ್ನೂ ಕಳ್ಳರು ಕದ್ದು ಖರ್ಚಿಗೆ ಹಣವಿಲ್ಲದೆ ಇದೀಗ ಹೊಟ್ಟೆಗೆ ಅನ್ನ ಆಹಾರವಿಲ್ಲದೆ ಬೀದಿಯಲ್ಲಿ ಪರದಾಡುತಿದ್ದಾಳೆ ಅಲ್ಲದೆ ಆಕೆ ಖಿನ್ನತೆಗೆ ಒಳಗಾಗಿದ್ದಾಳೆ, ಆಕೆಯ ಆರೋಗ್ಯವೂ ತುಂಬಾ ಹದಗೆಟ್ಟಿದ್ದು ಆಕೆಯನ್ನು ಆದಷ್ಟು ಬೇಗ ಭಾರತಕ್ಕೆ ಕರೆ ತನ್ನಿ ಎಂದು ವಿದೇಶಾಂಗ ಸಚಿವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ಇನ್ನು ತಾಯಿಯ ಪತ್ರಕ್ಕೆ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದ್ದು ಯುವತಿಯ ರಕ್ಷಣೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದಾಗಿ ತಿಳಿಸಿದ್ದಾರೆ.