ಬೆಂಗಳೂರು, ಜು 26 (DaijiworldNews/HR): ನಮ್ಮ ಮೆಟ್ರೋ ಪಿಲ್ಲರ್ ಕುಸಿದು ಬಿದ್ದು ಮಹಿಳೆ ಮತ್ತು ಮಗು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಕೋಟಿ ರೂ. ಪರಿಹಾರ ನೀಡುವಂತೆ ಕೋರಿ ಮಹಿಳೆಯ ಪತಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ನಡೆಸಿದೆ.
ರಾಜ್ಯ ಸರ್ಕಾರ, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಮತ್ತು ಇತರರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ಅರ್ಜಿದಾರ ಲೋಹಿತ್ಕುಮಾರ ವಿ ಸುಲಾಖೆ ಅವರು 10 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಕೋರಿ ರಿಟ್ ಅರ್ಜಿ ಸಲ್ಲಿಸಿದ್ದರು.
ಇನ್ನು ಈ ವರ್ಷ ಜನವರಿ 10 ರಂದು ನಾಗವಾರ ಬಳಿ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಪಿಲ್ಲರ್ ಬಿದ್ದು ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ತೇಜಸ್ವಿನಿ ಎಲ್ ಸುಲಾಖೆ (26) ಮತ್ತು ಅವರ ಎರಡೂವರೆ ವರ್ಷದ ಮಗ ವಿಹಾನ್ ಸಾವನ್ನಪ್ಪಿದ್ದು, ಮೃತರ ಕುಟುಂಬಕ್ಕೆ 20 ಲಕ್ಷ ಪರಿಹಾರ ನೀಡುವುದಾಗಿ ಬಿಎಂಆರ್ಸಿಎಲ್ ತಿಳಿಸಿತ್ತು.
ಅಮಾಯಕರ ಜೀವಕ್ಕೆ ಕೇವಲ 20 ಲಕ್ಷ ರೂಪಾಯಿ ಪರಿಹಾರ ಸಾಕಾಗುವುದಿಲ್ಲ ಎಂದು ಲೋಹಿತ್ಕುಮಾರ್ ಅವರು ಅರ್ಜಿಯಲ್ಲಿ ಮನವಿ ಮಾಡಿದ್ದು, ಅವರ ಕುಟುಂಬಕ್ಕೆ 10 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.