ಮಧ್ಯಪ್ರದೇಶದ, ಜು 25 (DaijiworldNews/AK): ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ಕಂದಾಯ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿಯುವ ವೇಳೆ ಲಂಚದ ಹಣವನ್ನೇ ನುಂಗಿ ನೀರು ಕುಡಿದ ಘಟನೆ ಕಟ್ನಿಯಲ್ಲಿ ಬೆಳಕಿಗೆ ಬಂದಿದೆ.
ಮಧ್ಯಪ್ರದೇಶದ ಕಟ್ನಿಯ ಕಂದಾಯ ಅಧಿಕಾರಿಯಾಗಿರುವ ಪಟ್ವಾರಿ ಗಜೇಂದ್ರ ಸಿಂಗ್ , ಜಮೀನು ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ವ್ಯಕ್ತಿಯಿಂದ 5000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಬಗ್ಗೆ ವ್ಯಕ್ತಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದ ಹಿನ್ನಲೆ ಸೋಮವಾರ ಕಂದಾಯ ಅಧಿಕಾರಿ ಗಜೇಂದ್ರ ಸಿಂಗ್ ಅವರ ಕಚೇರಿಗೆ ವ್ಯಕ್ತಿ ತೆರಳಿದ್ದಾರೆ ಈ ವೇಳೆ ವ್ಯಕ್ತಿ ಕಂದಾಯ ಅಧಿಕಾರಿಗೆ ಲಂಚದ ಹಣವನ್ನು ಕೈಗೆ ನೀಡಿದ್ದಾರೆ. ದುಡ್ಡು ನೀಡುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಿಡೀರ್ ದಾಳಿ ನಡೆಸಿದ್ದಾರೆ.
ತಕ್ಷಣ ಕಂದಾಯ ಅಧಿಕಾರಿ ಕೈಯಲ್ಲಿದ್ದ 500 ರೂಗಳ ಹತ್ತು ನೋಟುಗಳನ್ನು ಮುದ್ದೆ ಮಾಡಿ ಬಾಯಿಯೊಳಗೆ ಹಾಕಿ ನೀರು ಕುಡಿದು ಬಿಟ್ಟಿದ್ದಾನೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯದಲ್ಲಿ ವೈರಲ್ ಆಗಿದೆ. ಲೋಕಾಯುಕ್ತ ಪೊಲೀಸರು ತಕ್ಷಣ ಹಣ ನುಂಗಿದ ಅಧಿಕಾರಿಯನ್ನು ಹತ್ತಿರದ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ನಡೆಸಿ ಬಳಿಕ ನುಂಗಿದ ಹಣವನ್ನು ಹೊರತೆಗೆದಿದ್ದಾರೆ. ಇದೀಗ ಕಂದಾಯ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.