ಮಣಿಪುರ, ಜು 23 (DaijiworldNews/MS): ಈಶಾನ್ಯ ರಾಜ್ಯದಲ್ಲಿ ಜನಾಂಗೀಯ ಘರ್ಷಣೆಗಳು ಅಮಾನವೀಯವಾಗಿ ಮಾರ್ಪಟ್ಟಿರುವುದರಿಂದ ಮಣಿಪುರದ ಭಯಾನಕ ಘಟನೆಗಳು ದೇಶದಾದ್ಯಂತ ಮಾತ್ರವಲ್ಲದೇ ವಿದೇಶದಲ್ಲಿ ಸದ್ದು ಮಾಡುತ್ತಿದೆ. ಇದೀಗ ಮತ್ತೊಂದು ಭಯಾನಕ ಘಟನೆ ಹೊರಬಿದ್ದಿದ್ದು ವೃದ್ಧ ಮಹಿಳೆಯೋರ್ವಳನ್ನು ಜನಸಮೂಹವು ತನ್ನ ಮನೆಯೊಳಗೆ ಜೀವಂತವಾಗಿ ಸುಟ್ಟುಹಾಕಿದ್ದಾರೆ ಎನ್ನಲಾಗಿದೆ.
ರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ, ಕಾಕ್ಚಿಂಗ್ ಜಿಲ್ಲೆಯ ಸೆರೌ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಪತ್ನಿಯಾಗಿದ್ದ 80 ವರ್ಷದ ಮಹಿಳೆಯನ್ನು ಸಶಸ್ತ್ರ ಪುರುಷರ ಗುಂಪು ಆಕೆಯ ಮನೆಯೊಳಗೆ ಜೀವಂತವಾಗಿ ಸುಟ್ಟುಹಾಕಿದೆ. ಸೆರೌ ಪೊಲೀಸ್ ಠಾಣೆಯ ಕೇಸ್ ಫೈಲ್ ನಲ್ಲಿ ಇದನ್ನು ಉಲ್ಲೇಖಿಸಲಾಗಿದೆ ಎನ್ನಲಾಗಿದೆ.
ಮೃತ ಮಹಿಳೆಯ ಪತಿ ಎಸ್ ಚುರಾಚಾಂಗ್ ಸಿಂಗ್ ಅವರು ಈಗಾಗಲೇ ಕೆಲ ವರ್ಷಗಳ ಹಿಂದೆ ನಿಧನರಾಗಿದ್ದು, ಅವರು 1947 ರಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆಗಾಗಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಂದ ಗೌರವಿಸಲ್ಪಟ್ಟಿದ್ದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಮೇ 28 ರಂದು ಮುಂಜಾನೆ ಈ ಘೋರ ಘಟನೆ ನಡೆದಿದೆ. ಒಂದು ಕಾಲದಲ್ಲಿ, ರಾಜ್ಯ ರಾಜಧಾನಿ ಇಂಫಾಲ್ನಿಂದ ಸುಮಾರು 45 ಕಿಮೀ ದೂರದಲ್ಲಿರುವ ಸುಂದರವಾದ ಗ್ರಾಮವು ಈಗ ಹಿಂಸಾಚಾರ ಮತ್ತು ಗುಂಡಿನ ದಾಳಿಯಿಂದ ಭಯಾನಕವಾಗಿದೆ