ಬೆಂಗಳೂರು, ಜು 23 (DaijiworldNews/AK):ನಿಮ್ಮನ್ನು'ಸುಳ್ಳುರಾಮಯ್ಶ' ಎಂದು ಕರೆಯುವುದು ನನಗೆ ಇಷ್ಟವಿಲ್ಲ. ನಿಮ್ಮ ಹೆಸರಿನಲ್ಲೇ 'ರಾಮ' ರಿದ್ದಾರೆ ಎಂದು ಜೆಡಿಎಸ್ ನಾಯಕ ಹೆಚ್'ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ನೀವು ಈಗ ಕರ್ನಾಟಕದ ಮುಖ್ಯಮಂತ್ರಿ. ನನಗೂ ಮುಖ್ಯಮಂತ್ರಿ, ಮಹಾದೇವಪ್ಪ ಅವರಿಗೂ ಮುಖ್ಯಮಂತ್ರಿ. ಕಾಕಾ ಪಾಟೀಲರಿಗೂ ಮುಖ್ಯಮಂತ್ರಿ. ನಿಮ್ಮನ್ನು 'ಸುಳ್ಳುರಾಮಯ್ಯ ಎಂದು ಕರೆಯುವುದು ನನಗೆ ಇಷ್ಟವಿಲ್ಲ. ಯಾಕೆಂದರೆ, ನಿಮ್ಮ ಹೆಸರಿನಲ್ಲೇ 'ರಾಮ'ರಿದ್ದಾರೆಂದು ಎಂದು ಟೀಕೆ ಮಾಡಿದ್ದಾರೆ.
ತಾವು 'ಸತ್ಯರಾಮಯ್ಯ'ನವರೇ ಆಗಿದ್ದರೆ, ಸ್ವತಃ ತಾವುಗಳೇ ನೇಮಿಸಿದ್ದ, ತಮ್ಮದೇ ಸರಕಾರದ ಕಾನೂನು ಸಚಿವರೇ ಮುಖ್ಯಸ್ಥರಾಗಿದ್ದ ಸದನ ಸಮಿತಿ ನೀಡಿದ್ದ ನೈಸ್ ಕರ್ಮಕಥೆಯನ್ನು ನೀವು ದಯಮಾಡಿ ಪುರುಸೊತ್ತು ಮಾಡಿಕೊಂಡು ಪಾರಾಯಣ ಮಾಡಿ ಎಂದು ಸಲಹೆ ನೀಡಿದ್ದಾರೆ.
2018ರ ನೈಸಿನ ಕೊಚ್ಚೆಯಲ್ಲಿ ಹೊರಳಾಡಿ ಪೊಗದಸ್ತಾಗಿ ಮೇಯ್ದು ಬಲಿತಿದ್ದ ಪ್ರಾಣಿಗಳನ್ನು ಎದುರು ಹಾಕಿಕೊಂಡು ನಾನು ತೆಗೆದುಕೊಂಡ ರಿಸ್ಕ್ ಸಣ್ಣದೇನಲ್ಲ. ನನ್ನ ಮೇಲೆ ಬಂದ ಒತ್ತಡಗಳ ಬಗ್ಗೆ ನಿಮಗೂ ಮಾಹಿತಿ ಇರಬಹುದು. ಆಗ ನೀವು ಮತ್ತು ನಿಮ್ಮ ಟೀಂ ನನಗೆ ಕೊಟ್ಟ 'ನಿತ್ಯ ಕಿರುಕುಳ'ವನ್ನು ಮರೆಯಲಾದೀತೆ ಎಂದು ಪ್ರಶ್ನಿಸಿದ್ದಾರೆ. ಸ್ವತಃ ನೀವೇ ನೇಮಿಸಿದ್ದ ಸದನ ಸಮಿತಿ ವರದಿಯ ಮೇಲೆ ಖಡಕ್ ಕ್ರಮ ಜರುಗಿಸಿ. ವರದಿಯಲ್ಲಿ ನೈಸ್ ಅಕ್ರಮಗಳ ಭಾಗವತವೇ ತೆರೆದುಕೊಂಡಿದೆ. ಇಡೀ ಯೋಜನೆಯನ್ನು ಸರಕಾರದ ವಶಕ್ಕೆ ಪಡೆಯಲು ದಿಟ್ಟಹೆಜ್ಜೆ ಇಡಿ ಎಂದು ಹೆಚ್ ಡಿಕೆ ಸವಾಲು ಹಾಕಿದ್ದಾರೆ.