ಬೆಂಗಳೂರು, ಜು 22(DaijiworldNews/AK):ಸೋಶಿಯಲ್ ಮೀಡಿಯಾದಲ್ಲಿ ಸರ್ಕಾರ, ಮಂತ್ರಿಗಳ ವಿಚಾರದಲ್ಲಿ ವೈಯಕ್ತಿಕವಾಗಿ ನಕಲಿ ಸುದ್ದಿಗಳು ಹೆಚ್ಚಾಗುತ್ತಿವೆ.ಇವುಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಇದೇ ವೇಳೆ ‘ಸಿಎಂ ಆಯ್ಕೆ ಮಾಡೋದು ಗೊತ್ತು, ಕೆಳಗೆ ಇಳಿಸೋದು ಗೊತ್ತಿದೆ’ ಎಂಬ ಬಿ ಕೆ ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿ.ಕೆ.ಹರಿಪ್ರಸಾದ್ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಈ ವಿಚಾರದಲ್ಲಿ ನನಗೆ ಏನೂ ಗೊತ್ತಿಲ್ಲ. ಮುಖ್ಯಮಂತ್ರಿಗಳು ಸಮರ್ಥರಿದ್ದಾರೆ, ಅವರೇ ಉತ್ತರ ನೀಡುತ್ತಾರೆ ಎಂದರು.
ಪಿಎಸ್ಐ ಅಕ್ರಮ ನ್ಯಾಯಾಂಗ ತನಿಖೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ನಿನ್ನೆ ಆದೇಶ ಮಾಡಿದ್ದೇವೆ. ನ್ಯಾಯಾಧೀಶ ವೀರಪ್ಪ ಅವರನ್ನು ನೇಮಕ ಮಾಡಲಾಗಿದ್ದು ಏಕ ಸದಸ್ಯತ್ವದಲ್ಲಿ ತನಿಖೆ ಆಗಲಿದೆ. ನ್ಯಾಯಾಂಗ ತನಿಖೆ ಆಗಬೇಕು ಎಂದು ಹಿಂದೆ ನಾವೇ ಹೇಳಿದ್ದೆವು. ಸತ್ಯಾಸತ್ಯತೆಗಳನ್ನು ಹೊರಗೆ ತರಬೇಕು ಎಂದು ಕೊಟ್ಟಿದ್ದೇವೆ.
ತನಿಖೆ ಬೇರೆ ಮಾಡುತ್ತೇವೆ, ನೇಮಕಾತಿಯ ಪ್ರಕ್ರಿಯೆ ಬೇರೆ ಮಾಡುತ್ತೇವೆ. ಇನ್ನೊಂದು ನೇಮಕಾತಿ ಆಗಬೇಕು. 400 ಹುದ್ದೆಗಳು ಖಾಲಿ ಇವೆ. ಅವುಗಳನ್ನು ನೇಮಕ ಮಾಡಬೇಕೆಂದರೂ ಈ ಪ್ರಕರಣ ಇತ್ಯರ್ಥ ಆಗಬೇಕು ಎಂದರು.