ಕೊಲ್ಕತ್ತಾ,ಏ03(AZM):ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಸ್ಪೀಡ್ ಬ್ರೇಕರ್ ಎಂದು ಕರೆದಿದ್ದ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಮಮತಾ ಬ್ಯಾನರ್ಜಿಯವರು ತಿರುಗೇಟು ನೀಡಿದ್ದಾರೆ. ನರೇಂದ್ರ ಮೋದಿಯವರು ಎಕ್ಸ್ ಪೈರಿ ಬಾಬು ಆಗಿದ್ದಾರೆ ಎಂದು ಮಮತಾ ಹೇಳಿದ್ದಾರೆ.
ಈ ಕುರಿತು ಉತ್ತರ ಬಂಗಾಳದ ದಿನ್ಹತಾದಲ್ಲಿ ಮಾತನಾಡಿದ ಅವರು 2019ರಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೇರಿದರೆ ಮತ್ತೆ ಲೋಕಸಭಾ ಚುನಾವಣೆಗಳೇ ನಡೆಯಲ್ಲ. ಯಾಕೆಂದರೆ ಅವರು ಭಾರತದ ಸಂವಿಧಾನವನ್ನೇ ಬದಲಿಸುತ್ತಾರೆ ಎಂದಿದ್ದಾರೆ.
ಪಶ್ಚಿಮ ಬಂಗಾಳ ಮತ್ತು ರಾಜಧಾನಿ ಕೊಲ್ಕತ್ತದಲ್ಲಿ ಒಂದರ ಹಿಂದೆ ಒಂದರಂತೆ ಬುಧವಾರ ರ್ಯಾಲಿ ನಡೆಸಿದ ಮೋದಿ, ತೃಣಮೂಲ ಕಾಂಗ್ರೆಸ್ ಮತ್ತು ಮಮತಾ ಬ್ಯಾನರ್ಜಿ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ವಾಗ್ದಾಳಿ ನಡೆಸಿದ ಮಮತಾ, ಮೋದಿ ನಿರಂಕುಶ ಅಧಿಕಾರಿ, ಕೋಮುವಾದಿ, ದಂಗೆಕೋರ ಮತ್ತು ಬಡವರ ವಿರೋಧಿ ಎಂದಿದ್ದಾರೆ. ತಮ್ಮ ಭಾಷಣದುದ್ದಕ್ಕೂ ಮೋದಿಯವರನ್ನು ಹಲವಾರು ಬಾರಿ ಎಕ್ಸ್ಪೈರಿ ಬಾಬು ಎಂದು ಹೇಳಿದ ಮಮತಾ, ಅವರ ಈ ಅಧಿಕಾರ ಮುಗಿಯುವ ಹಂತದಲ್ಲಿದೆ ಎಂದಿದ್ದಾರೆ.
ಬಿಜೆಪಿ ಗೆದ್ದರೆ ಸಂವಿಧಾನವನ್ನೇ ಬದಲಾಯಿಸುತ್ತಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದರು. ಅದೇ ಮಾತನ್ನು ಪುನರಾವರ್ತಿಸಿದ ಮಮತಾ, ಮೋದಿ ತಮ್ಮನ್ನು ದೇಶದ ಚೌಕೀದಾರ್ ಅಂತ ಹೇಳುತ್ತಿದ್ದಾರೆ. ಹೀಗಿರುವಾಗ ಪುಲ್ವಾಮಾದಲ್ಲಿ ನಮ್ಮ ಯೋಧರನ್ನು ರಕ್ಷಿಸಲು ಅವರಿಂದ ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.