ಬೆಂಗಳೂರು, ಜು 21 (DaijiworldNews/MS): ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಮದ್ಯೆಯೇ ಬೆಲೆ ಏರಿಕೆಯ ಬಿಸಿ ಜನತೆಗೆ ತಟ್ಟಲಾರಂಭಿಸಿದೆ. ಬೆಳೆ ಕಾಳು, ತರಕಾರಿ ಬೆಲೆ ಗಗನಕ್ಕೇರಿದ್ದು ಇದೀಗ ನಂದಿನಿ ಹಾಲಿನ ದರ ಏರಿಕೆ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ದರ ಏರಿಕೆ ಸಂಬಂಧ ಇಂದು ಸಂಜೆ ಕೆಎಂಎಫ್ ಆಡಳಿತ ಮಂಡಳಿ ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಲಿದ್ದಾರೆ. ಕೆಎಂಎಫ್ ಅಧಿಕಾರಿಗಳು ಐದು ರೂಪಾಯಿ ಹಾಲಿನ ದರ ಏರಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಸರ್ಕಾರ ಮೂರು ರೂಪಾಯಿ ಹೆಚ್ಚಳಕ್ಕೆ ನಿರ್ಧಾರ ಮಾಡುವ ಸಾಧ್ಯತೆ ಇದೆ.
ಸಂಜೆ 6 ಗಂಟೆಗೆ ಹಾಲು ಒಕ್ಕೂಟಗಳು, ಕೆಎಂಎಫ್ ಪದಾಧಿಕಾರಿಗಳ ಜೊತೆ ಸಭೆ ನಡೆಸಲಿದ್ದು, ನಂದಿನಿ ಹಾಲಿನ ದರ ಏರಿಕೆ ಭವಿಷ್ಯ ಇಂದೇ ನಿರ್ಧಾರವಾಗುವ ಸಾಧ್ಯತೆಗಳಿವೆ. ಸಿಎಂ ಜೊತೆ ಚರ್ಚಿಸಿದ ಬಳಿಕ ಕೆಎಂಎಫ್ ಅಧಿಕಾರಿಗಳು ನಿರ್ಧಾರ ಮಾಡಲಿದ್ದಾರೆ. ಹಾಗಾಗಿ ಹಾಲಿನ ದರ ಇಂದು ನಿರ್ಧಾರ ಆಗುವ ಸಾಧ್ಯತೆ ಇದೆ.