ಬೆಂಗಳೂರು ಜು 21 (DaijiworldNews/AK): ರಾಜ್ಯ ಸರಕಾರ ಸುಳ್ಳು ಭರವಸೆಗಳ ಮೂಲಕ ಅಧಿಕಾರಕ್ಕೆ ಬಂದು ತನ್ನ ಆಶ್ವಾಸನೆಗಳನ್ನು ಈಡೇರಿಸಲು ಸಾಧ್ಯವಾಗದೇ ಇದೀಗ ಸರ್ವಾಧಿಕಾರಿ ವರ್ತನೆ ತೋರುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಪಾಲರ ಬಳಿ ನಿಯೋಗ ತೆರಳಿ ಮನವಿ ಸಲ್ಲಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು, ಜನರು ನಮ್ಮನ್ನೂ ಆಯ್ಕೆ ಮಾಡಿದ್ದಾರೆ. ನಮಗೂ ಕರ್ತವ್ಯ - ಜವಾಬ್ದಾರಿ ಇದೆ ಎಂದು ಅವರು ಹೇಳಿದರು.
ಸರಕಾರ ಮಾಡಲು ಅವರಿಗೆ ನಂಬರ್ ಕೊಟ್ಟರೆ ಜನರ ಪರವಾಗಿ, ಸಂಕಷ್ಟದಲ್ಲಿ ಇರುವವರ ಪರವಾಗಿ ಧ್ವನಿ ಎತ್ತಲು ನಮಗೂ ನಂಬರ್ ಕೊಟ್ಟಿದ್ದಾರೆ ಎಂದು ವಿಶ್ಲೇಷಿಸಿದರು. ಸ್ಪೀಕರ್, ರಾಜಕೀಯ ಸಭೆಗೆ ತೆರಳಿ ಊಟ ಮಾಡಿ ಬರುತ್ತಾರೆ ಎಂದರೆ ಸದನದ ಗೌರವ ಎಲ್ಲಿಗೆ ಬಂತು ಎಂದು ಪ್ರಶ್ನಿಸಿದರು. ಸ್ಪೀಕರ್ ವಿರುದ್ಧ ನಾವು ಅವಿಶ್ವಾಸ ಗೊತ್ತುವಳಿ ಮಂಡಿಸುತ್ತೇವೆ ಎಂದು ತಿಳಿಸಿದರು.